ಚಿತ್ರದುರ್ಗ : ಧಾರ್ಮಿಕ ಐಕ್ಯತೆ ಸಮಗ್ರತೆಯಲ್ಲಿ ಉಡುಪಿಯ ಪೇಜಾವರ ಮಠ ಅನಾದಿ ಕಾಲದಿಂದಲೂ ಅಪಾರ ಕೊಡುಗೆ ನೀಡುತ್ತ ಬರುತ್ತಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಗುಣಗಾನ ಮಾಡಿದರು.
ಹರಿವಾಯು ಗುರು ಸೇವಾ ಟ್ರಸ್ಟ್ ವತಿಯಿಂದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರದಿಂದ ಆರಂಭಗೊಂಡಿರುವ 25 ನೇ ವರ್ಷದ ಹರಿದಾಸ ಹಬ್ಬ ಉದ್ಘಾಟಿಸಿ ಮಾತನಾಡಿದರು.
ಭೀಮ ನದಿ ಉಕ್ಕಿ ಹರಿದು ಇಡಿ ಗ್ರಾಮವೇ ಕೊಚ್ಚಿಕೊಂಡು ಹೋದಾಗ ಅಲ್ಲಿಗೆ ಭೇಟಿ ನೀಡಿದ ಪೇಜಾವರ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ವಿಶ್ವೇಶತೀರ್ಥ ಶ್ರೀಪಾದಂಗಳವರು ನೆಲೆ ಕಳೆದುಕೊಂಡ ಎಲ್ಲರಿಗೂ ಮನೆಗಳನ್ನು ಕಟ್ಟಿಸಿ ಜೊತೆಗೆ ಒಂದೊಂದು ಹಸುಗಳನ್ನು ನೀಡಿದರು. ಆಗ ಆ ಗ್ರಾಮದ ಹೆಸರೆ ಗೋವಿಂದಪುರ ಎಂದು ಬದಲಾಯಿತು. ಯಾವ ಸರ್ಕಾರಗಳು ಇಂತಹ ಯೋಜನೆಗಳನ್ನು ತರಲಿಲ್ಲ. ಇಂದಿನ ಪೀಠಾಧಿಪತಿ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ವಿಶ್ವೇಶತೀರ್ಥ ಶ್ರೀಪಾದಂಗಳವರ ಹೆಜ್ಜೆಯಲ್ಲಿ ಸಾಗುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶರಣ ಸಂಸ್ಕøತಿ, ಸೂಫಿ ಸಂಸ್ಕøತಿ, ದಾಸ ಸಂಸ್ಕøತಿ ಮೂರು ಹುಟ್ಟಿದೆ. ಸರಸ್ವತಿ ಕೃಪೆ ಯಾರಿಗಾಗುತ್ತದೋ ಅವರೆ ಭಾಗ್ಯವಂತರು. ಕನಕದಾಸ, ಪುರಸಂದರದಾಸ, ವ್ಯಾಸರಾಯರು ಮೂಢನಂಬಿಕೆ, ಕಂದಾಚಾರ, ಗೊಡ್ಡು ಸಂಪ್ರದಾಯಗಳ ವಿರುದ್ದ ಈಜಿದವರು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ಅಯೋಧ್ಯೆಯಲ್ಲಿ ನಡೆದ ರಾಮನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಪೇಜಾವರ ಮಠದ ಶ್ರೀಪಾದಂಗಳವರು ಇದ್ದರೆಂದರೆ ಅದು ಸುಲಭದ ಮಾತಲ್ಲ. ಈಗಿನ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಎಲ್ಲಾ ಕಡೆ ಕಾರ್ಯತಂತ್ರ ವಿಸ್ತರಿಸಿದ್ದಾರೆ. ವಿಪ್ರ ಸಮಾಜ ಚಿತ್ರದುರ್ಗಕ್ಕೆ ದೊಡ್ಡ ಕೊಡುಗೆ ನೀಡಿದೆ. ತ.ರಾ.ಸು. ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಹೆಸರುಗಳನ್ನು ಸ್ಮರಿಸಿದರು.
ಚಿತ್ರದುರ್ಗದಲ್ಲಿ ಭವ್ಯವಾದ ಶ್ರೀಕೃಷ್ಣನ ದೇವಸ್ಥಾನ ನಿರ್ಮಾಣವಾಗಬೇಕಾಗಿರುವುದರಿಂದ ದೊಡ್ಡ ಜಾಗ ನೀಡುವಂತೆ ಸಂಸದರಲ್ಲಿ ಮನವಿ ಮಾಡಿದ ಕೆ.ಎಸ್.ನವೀನ್ ಬ್ರಾಹ್ಮಣ ಸಮುದಾಯಕ್ಕೆ ಸಂಸ್ಕಾರವಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಈ ಸಮಾಜ ಮುಂಚೂಣಿಯಲ್ಲಿತ್ತು. ಉಡುಪಿಗೆ ಪ್ರಥಮವಾಗಿ ಬಸ್ ಬಿಟ್ಟಿದ್ದು, ನಾವು, ತಿರುಪತಿ, ಶೃಂಗೇರಿ, ಧರ್ಮಸ್ಥಳಕ್ಕೂ ಬಸ್ ಸಂಚಾರ ಆರಂಭಿಸಿದ್ದು ನಮ್ಮ ಫ್ಯಾಮಿಲಿ ಎಂದರು.
ಹರಿದಾಸ ಹಬ್ಬದ ಸಾನಿಧ್ಯ ವಹಿಸಿದ್ದ ವಿಶ್ವಪ್ರಸನ್ನ ಶ್ರೀಪಾದಂಗಳವರು ಆಶೀರ್ವಚನ ನೀಡುತ್ತ ಹರಿವಾಯು ಗುರು ಸೇವಾ ಟ್ರಸ್ಟ್ನವರು ನಿರಂತರವಾಗಿ 25 ವರ್ಷಗಳಿಂದಲು ಹರಿದಾಸ ಹಬ್ಬ ಆಚರಿಸಿಕೊಂಡು ಬರುತ್ತಿರುವುದನ್ನು ನೋಡಿದರೆ ಅವರಲ್ಲಿ ಒಗ್ಗಟ್ಟಿದೆ ಎನ್ನುವುದು ಗೊತ್ತಾಗುತ್ತದೆ. ಯಾವುದೇ ಒಂದು ಸಂಸ್ಥೆಯನ್ನು ಹುಟ್ಟುಹಾಕುವುದು ದೊಡ್ಡದಲ್ಲ. ಮುನ್ನಡೆಸಿಕೊಂಡು ಹೋಗುವುದು ಸಾಹಸದ ಕೆಲಸ. ವೈಮನಸ್ಸು ಬಂದರೆ ಹೋಳಾಗುತ್ತದೆ. ಬಾಲಗ್ರಹ ಪೀಡೆಗಳನ್ನು ದಾಟಿ ಬೆಳೆಯುತ್ತಿದೆಯೆಂದರೆ ಕಮ್ಮಿ ಸಾಧನೆಯಲ್ಲ ಎಂದು ಪ್ರಶಂಶಿಸಿದರು.
ಹುಟ್ಟಿದ ಪ್ರತಿಯೊಬ್ಬರು ಬೆಳೆಯಲು ಎಷ್ಟೋ ಅವಕಾಶಗಳಿವೆ. ಹರಿ ಎಂದರೆ ಸಮಸ್ತ ಸದ್ಗುಣಗಳ ಗಣಿ. ಸದ್ಗುಣಗಳ ದಾಸರಾದಾಗ ಬದುಕು ಹಬ್ಬವಾಗುತ್ತದೆ. ದುರ್ಗುಣಗಳನ್ನು ದೂರ ಮಾಡಿಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿಪ್ರ ಸಮಾಜಕ್ಕೆ ಜಾಗ ನೀಡುವುದಾದರೆ ಶ್ರೀಕೃಷ್ಣನ ದೇವಸ್ಥಾನ, ಶಾಲೆ, ಆಸ್ಪತ್ರೆ ಒಂದೆ ಕಡೆ ನಿರ್ಮಾಣವಾಗುವಂತ ವಿಶಾಲವಾದ ಭೂಮಿ ನೀಡಿ ಎಂದು ಸಂಸದ ಗೋವಿಂದ ಕಾರಜೋಳರವರ ಗಮನ ಸೆಳೆದರು.
ರಾಘವೇಂದ್ರಸ್ವಾಮಿಗಳ ಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್ಯ ಕೊಪ್ಪದ, ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ, ನಗರಸಭೆ ಸದಸ್ಯ ಜಿ.ಹರೀಶ್, ವೈಷ್ಣವಸಭಾ ಅಧ್ಯಕ್ಷ ಜಗದೀಶ್ ಜೆ.ಅಯ್ಯಂಗಾರ್, ಚಿತ್ರದುರ್ಗ ಬಡಗನಾಡು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎ.ಶೇಷಗಿರಿರಾವ್, ಉತ್ತರಾಧಿಮಠದ ವ್ಯವಸ್ಥಾಪಕ ಪ್ರಭಂಜನಾಚಾರ್ಯ ಕೂಸನೂರು, ಹೊಸದುರ್ಗ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ಚಂದ್ರಪ್ರಕಾಶ್, ಸಂಸ್ಕಾರ ಭಾರತಿಯ ರಾಮಚಂದ್ರ ಇವರುಗಳು ವೇದಿಕೆಯಲ್ಲಿದ್ದರು.
ಹರಿವಾಯು ಗುರುಸೇವಾ ಟ್ರಸ್ಟ್ನ ಅಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಜೋಯಿಸ್ ಹುಲಿರಾಜ್ ಸೇರಿದಂತೆ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳು ಹರಿದಾಸ ಹಬ್ಬದಲ್ಲಿ ಹಾಜರಿದ್ದರು.

































