ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿಯ ವಿಚಾರ ಕುರಿತಂತೆ ಮುಖ್ಯಮಂತ್ರಿಯ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಚಿತ್ರದುರ್ಗ ತಾಲೂಕು ಶಾಸಕರಾದ ಕೆ.ಸಿ ವೀರೇಂದ್ರ (ಪಪ್ಪಿ) ಅವರು ಚರ್ಚಿಸಿದ್ದಾರೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚಿತ್ರದುರ್ಗ ನಗರದ ಅಭಿವೃದ್ಧಿ ವಿಚಾರದ ಬಗ್ಗೆ ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವರು ಚರ್ಚಿಸಿ ಅಭಿವೃದ್ಧಿ ಕಾರ್ಯಗಳ ಕ್ರಮ ಆದೇಶ ನೀಡುವಂತೆ ಮನವಿ ಮಾಡಿದ್ದಾರೆ.
ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರದ ಮುಖ್ಯ ರಸ್ತೆಯನ್ನ ಡಿಪಿಆರ್ ಮಾಡುವಂತೆ ನಿರ್ದೇಶನವನ್ನು ನೀಡಿದ್ದಾರೆ ಮತ್ತು ಚಿತ್ರದುರ್ಗ ನಗರದ ಹೊರವಲಯದ ಕುಂಚಿಗನಾಳ್ ಬಳಿ ಇರುವ ನೂತನ ಜಿಲ್ಲಾಧಿಕಾರಿ ಕಟ್ಟಡವನ್ನು ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ವಸತಿಗೃಹದ ಸಮೀಪದಲ್ಲಿ ನೂತನವಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸುವಂತೆ ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಹಾಗೂ ಹೊಸದುರ್ಗದ ಶಾಸಕ ಗೋವಿಂದಪ್ಪ, ಚಿತ್ರದುರ್ಗ ಶಾಸಕ ಕೆ.ಸಿ ವೀರೇಂದ್ರ (ಪಪ್ಪಿ) ಅವರು ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.