ತಿರುವನಂತಪುರಂ: ತನ್ನ ಪ್ರಿಯಕರನಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿ ಆತನನ್ನು ಅತೀ ಕ್ರೂರವಾಗಿ ಕೊಲೆ ಮಾಡಿದ ಕೊಲೆಗಾತಿ ಗ್ರೀಷ್ಮಾಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
2022 ರಲ್ಲಿ ತನ್ನ ಬಾಯ್ ಫ್ರೆಂಡ್ ಶರೋನ್ ರಾಜ್ಗೆ ಮಾರಕ ಕಳೆನಾಶಕ ಬೆರೆಸಿದ ಆಯುರ್ವೇದ ಮಿಶ್ರಣವನ್ನು ಕುಡಿಸಿ ಕೊಲೆ ಮಾಡಿದ್ದಳು. ನ್ಯಾಯಮೂರ್ತಿ ಎ ಎಂ ಬಶೀರ್ ಅವರು ವಾದ ವಿವಾದ ಆಲಿಸಿದ ನಂತರ ತೀರ್ಪು ನೀಡಿ, ಇದು ಅಪರೂಪದ ಪ್ರಕರಣ, ಸರಿಯಾಗಿ ಪೂರ್ವನಿಯೋಜಿತವಾಗಿ ನಡೆಸಿದ ಅಪರಾಧ ಕೃತ್ಯವಾಗಿದೆ ಎಂದು ತೀರ್ಮಾನಿಸಿದರು. ಆರೋಪಿಯು ಆಕೆಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಕಾರಣದಿಂದಾಗಿ ಯಾವುದೇ ವಿನಾಯ್ತಿಗೆ ಅರ್ಹಳಲ್ಲ ಎಂದು ತೀರ್ಪು ನೀಡಿದರು. ಮಹಿಳೆಯ ಕೃತ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದು ಆರೋಪಿ ಪ್ರೀತಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿದ್ದಾಳೆ ಎಂದು ಕಂಡುಬರುತ್ತಿದೆ ಎಂದರು. ತೀರ್ಪು ಕೇಳಲು ಶರೋನ್ ಪೋಷಕರನ್ನು ನ್ಯಾಯಾಲಯವು ಕರೆಸಿಕೊಂಡಿತ್ತು. ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಕಣ್ಣೀರು ಸುರಿಸಿದರು.
24 ವರ್ಷದ ಗ್ರೀಷ್ಮಾ ಗಲ್ಲು ಶಿಕ್ಷೆಗೆ ಗುರಿಯಾದ ಕೇರಳದ ಅತ್ಯಂತ ಕಿರಿಯ ಮಹಿಳೆ . ಗಲ್ಲು ಶಿಕ್ಷೆಗೆ ಗುರಿಯಾದ ರಾಜ್ಯದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2024ರ ವಿಝಿಂಜಂ ಶಾಂತಕುಮಾರಿ ಹತ್ಯೆ ಪ್ರಕರಣದಲ್ಲಿ ರಫೀಕಾ ಬೀವಿ ಶಿಕ್ಷೆಗೆ ಗುರಿಯಾದ ಮೊದಲ ಮಹಿಳೆ . ಎರಡೂ ತೀರ್ಪುಗಳನ್ನು ನೆಯ್ಯಟ್ಟಿಂಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ.ಎಂ.ಬಶೀರ್ ಅವರು ಪ್ರಕಟಿಸಿದರು.