ಚಿತ್ರದುರ್ಗ : ಸರ್ಕಾರ ಜಾರಿ ಮಾಡಿರುವ ಗ್ಯಾರೆಂಟಿ ಯೋಜನೆಗಳು ಸರಿಯಾದ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ತಲುಪಿದ್ದೇಯೂ ಇಲ್ಲವೂ ಎಂಬುದರ ಬಗ್ಗೆ ಅಧಿಕಾರಿಗಳು ಪರೀಶೀಲನೆಯನ್ನು ಮಾಡಬೇಕಿದೆ, ಸರ್ಕಾರ ಮತ್ತು ಫಲಾನುಭವಿಗಳ ಮಧ್ಯೆ ನಮ್ಮ ಸಮಿತಿ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷ ಆರ್.ಪ್ರಕಾಶ್ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಚಿತ್ರದುರ್ಗ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿಯೂ ಪ್ರಚಾರಪಡಿಸಲು ತಕ್ಷಣವೇ ಅಗತ್ಯ ಕ್ರಮವಹಿಸಬೇಕು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸಲು ಅಧಿಕಾರಿಗಳು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ತಿಳಿಸಿದ ಅವರು, ಯಾವುದೇ ಮಧ್ಯವರ್ತಿಗಳಿಲ್ಲದೆ ಗ್ಯಾರಂಟಿ ಯೋಜನೆಗಳ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಯಾಗುತ್ತಿದೆ ಎಂದು ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಎಲ್ಲ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಗೃಹಲಕ್ಷ್ಮೀ ಯೋಜನೆಗಳ ಫಲಾನುಭವಿಗಳ ಪಟ್ಟಿ, ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಅನ್ನಭಾಗ್ಯ ಯೋಜನೆಗಳ ಫಲಾನುಭವಿಗಳು ಪಟ್ಟಿ ಹಾಗೂ ಬೆಸ್ಕಾಂ ಕಚೇರಿಯ ಸೂಚನಾ ಫಲಕಗಳಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಪ್ರಚಾರ ಪಡಿಸಬೇಕು. ಶಕ್ತಿ ಯೋಜನೆ ಕುರಿತು ಬಸ್ಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ಆಡಿಯೋ ಮತ್ತು ವಿಡಿಯೋ ಜಿಂಗಲ್ಸ್ ಪ್ರದರ್ಶಿಸಬೇಕು. ಯುವ ನಿಧಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಸದಸ್ಯರಾದ ಅಬ್ಬುಲ್, ತಾ.ಸಮಿತಿ ಸದಸ್ಯರಾದ ಸೈಯದ್ ಮುದಾಸಿರ್, ಪ್ರಕಾಶ್, ಶಿವಣ್ಣ, ತಿಪ್ಪೇಸ್ವಾಮಿ, ಪರಮೇಶ್ವರಪ್ಪ, ಬಸವರಾಜಪ್ಪ, ಕಾಂತರಾಜ್, ಶಿವಮೂರ್ತಿ, ಶಶಿಕಿರಣ, ಆಶೋಕ್ ನಾಯ್ಡು, ಸೈಯದ್ ಸಾದತ್, ನಜ್ಮಾತಾಜ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ಸಮಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.