ಬೆಂಗಳೂರು: ಸಲೂನ್, ಬ್ಯೂಟಿ ಪಾರ್ಲರ್ಗಳಲ್ಲಿ ಪ್ರಮಾಣಪತ್ರ ಇಲ್ಲದವರು ಕೂಡ ಕೆಲಸ ಮಾಡುತ್ತಿದ್ದಾರೆ. ಫೇಶಿಯಲ್ ಸೇರಿದಂತೆ ಚರ್ಮಕ್ಕೆ ಸಂಬಂಧಿಸಿದ ಅನೇಕ ಚಿಕಿತ್ಸೆಗಳನ್ನು ನೀಡುತ್ತಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಕೆಲವು ಬ್ಯೂಟಿ ಪಾರ್ಲರ್ಗಳು ಹಾನಿಕಾರಕ ಸ್ಟೀರಾಯ್ಡ್ ಬೇಸ್ಡ್ ಔಷಧ, ಕ್ರೀಮ್ ಹಾಗೂ ಕಾಸ್ಮೆಟಿಕ್ಸ್ ಬಳಕೆ ಮಾಡಿಕೊಂಡು ಜನರ ಆರೋಗ್ಯಕ್ಕೆ ಸಂಚಕಾರ ತರುತ್ತಿವೆ. ಸಲೂನ್ ಸೆಂಟರ್ಗಳಲ್ಲಿಯೂ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದ ಪ್ರಾಕ್ಟೀಸ್ ಗಳನ್ನು ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಿದ್ದಾರೆ. ಎಂಬಿಬಿಎಸ್ ಪ್ರಾಕ್ಟೀಸ್ ಮಾಡದೆ ಬ್ಯೂಟಿ ಕ್ಲಿನಿಕ್ಗಳಲ್ಲಿ ಕೆಲವರು ರಾಸಾಯನಿಕ ಚಿಕಿತ್ಸೆ ನೀಡುತ್ತಿದ್ದಾರೆ.
ಪ್ಲಾಸ್ಟಿಕ್ ಸರ್ಜರಿಯಲ್ಲಿ MD, DNB, DVL, DDV ಹಾಗೂ Mch, ಪ್ಲಾಸ್ಟಿಕ್ ಸರ್ಜರಿ ಪಿಜಿ ಅರ್ಹತೆ ಇಲ್ಲದೆ ಚಿಕಿತ್ಸೆ ಕೊಡುತ್ತಿದ್ದಾರೆ. ಇದರಿಂದ ಅನೇಕರು ಚರ್ಮ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಾಣಕ್ಕೂ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಇದಕ್ಕೆ ಕಡಿವಾಣ ಹಾಕುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಸಲೂನ್ ಸೆಂಟರ್, ಮಸಾಜ್ ಸೆಂಟರ್ಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಮುಂದಾಗಿದೆ. ಸಾಕಷ್ಟು ದೂರುಗಳು ಬಂದ ಕಾರಣ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಡರ್ಮಟಾಲಿಸ್ಟ್ ಅಸೋಸಿಯೇಷನ್ ಇಲಾಖೆಯ ನಿರ್ಧಾರವನ್ನು ಸ್ವಾಗತಿಸಿದೆ.
ಈ ಹಿಂದೆಯೂ ಕೂಡ ಅನೇಕ ಬಾರಿ ಆರೋಗ್ಯ ಇಲಾಖೆಗೆ ಅಸೋಸಿಯೇಷನ್ನಿಂದ ದೂರನ್ನು ನೀಡಲಾಗಿತ್ತು ಚರ್ಮ ರೋಗ ತಜ್ಞರ ಸಂಘಟನೆಯ ಸದಸ್ಯ ಜಗದೀಶ್ ಹೇಳಿದ್ದಾರೆ. ಮಾರ್ಗಸೂಚಿ ಹೊರಡಿಸಲು ಎಲ್ಲಾ ರೀತಿಯ ತಯಾರಿ ಮಾಡಲಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಲೂನ್, ಬ್ಯೂಟಿಪಾರ್ಲರ್ಗಳಿಗೆ ನಿಯಮ ಜಾರಿಯಾಗಲಿದೆ. ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು ಮಾಡಲು ಕೂಡ ಚಿಂತನೆ ನಡೆಯುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ