ಚಿತ್ರದುರ್ಗ : ಕನ್ನಡ ಕಾಯಕ ದತ್ತಿ ಪ್ರಶಸ್ತಿ, ಶ್ರೀಮತಿ ಟಿ. ಗಿರಿಜ ಸಾಹಿತ್ಯ ದತ್ತಿ ಪ್ರಶಸ್ತಿ, ಶ್ರೀಮತಿ ಕಂಡ್ಲೂರು ಗಿರಿಜಮ್ಮ ಮತ್ತು ಪರಸಿಂಹ ಜೋಗಿ ದತ್ತಿ ಪ್ರಶಸ್ತಿ, ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ದತ್ತಿ ಪ್ರಶಸ್ತಿಗೆ ವಿವಿಧ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ.
ಇದರಲ್ಲಿ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ದತ್ತಿಗೆ ಚಿತ್ರದುರ್ಗದ ರಾಜ್ಯ ಸಭೆಯ ಮಾಜಿ ಸದಸ್ಯರಾದ ಹೆಚ್.ಹನುಮಂತಪ್ಪರವರು ಆಯ್ಕೆಯಾಗಿದ್ದಾರೆ.
ಹೆಚ್.ಹನುಮಂತಪ್ಪರವರು 1982-2000ವರೆಗೆ ರಾಜ್ಯ ಸಭಾ ಸದಸ್ಯರಾಗಿದ್ದರು. ದಕ್ಷಿಣ ಭಾರತ ಹಿಂದಿ ಪ್ರಚಾರದ ಮುಖ್ಯಸ್ಥರು, ಭಾರತ್ ಸೇವಾದಳ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಚಿತ್ರದುರ್ಗದ ಸರಸ್ಪತಿ ಕಾನೂನು ಕಾಲೇಜಿನ ಅಧ್ಯಕ್ಷರಾಗಿ ರುತ್ತಾರೆ ರಾಷ್ಟ್ರೀಯ ಪ.ಜಾ/ಪ.ಪಂ. ಆಯೋಗದ ಮಾಜಿ ಅಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ಹಾಗೂ ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟ ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಎಸ್ ನಿಜಲಿಂಗಪ್ಪ ಸ್ಮಾರಕದ ಗೌರವ ಕಾರ್ಯದರ್ಶಿಯಾಗಿದ್ದಾರೆ. ಇವರ ಹಿರಿಯ ಗಾಂಧಿವಾದಿಗಳಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕನ್ನಡ ಸಾಹಿತ್ಯ ಪರಿಷತ್ತು 2024ನೇ ಸಾಲಿನ ನಾರಾಯಣ ಘಟ್ಟ ದತ್ತಿ ನೀಡಿ ಗೌರವಿಸುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತು 69ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವೂ ನ. 23ರ ಶನಿವಾರ, ಸಂಜೆ 4 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಲಿದೆ.
ರಾಷ್ಟ್ರೀಯ ವಿದ್ಯಾಲಯ ಸಂಸ್ಥೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಗಾಂಧಿವಾದಿ ಎ.ಆರ್ ನಾರಾಯಣಘಟ್ಟ ಅವರು ಪಠ್ಯಪುಸ್ತಕ ರಚನೆ ಸಮಿತಿ ಮತ್ತು ಪರಿಷ್ಕರಣ ಸಮಿತಿಯಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಇವರು ಗಾಂಧೀಜಿ ಅವರ ಜೀವನ ಆದರ್ಶಗಳನ್ನು ಆಳವಡಿಸಿಕೊಂಡು ಉತ್ತಮ ಸಾಧನೆ ತೋರಿದವರನ್ನು ಗೌರವಿಸುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಎ.ಆರ್. ನಾರಾಯಣಘಟ್ಟ ಮತ್ತು ಸರೋಜಮ್ಮ ಗಾಂಧಿ ಪುರಸ್ಕಾರ ಪುದುವಟ್ಟು ಹೆಸರಿನಲ್ಲಿ 2 ಲಕ್ಷ ರೂಪಾಯಿಗಳನ್ನು ದತ್ತಿನಿಧಿ ಸ್ಥಾಪಿಸಿರುತ್ತಾರೆ.
ದಾನಿಗಳ ಆಶಯದಂತೆ ಗಾಂಧಿ ಸಾಹಿತ್ಯ ರಚನೆ, ಆಸ್ಪೃಶ್ಯತಾ ನಿರ್ಮೂಲನ, ಪಾನ ನಿರೋಧ, ಖಾದಿ ಪ್ರಚಾರ ಮತ್ತು ಗ್ರಾಮಾಭಿವೃದ್ಧಿ ಈ ಅಂಶಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮಹನೀಯರಿಗೆ ಹಾಗೂ ಗಾಂಧಿ ಸಂಘ ಸಂಸ್ಥೆಗಳಿಗೆ ಪ್ರತಿ ವರ್ಷ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ ನೀಡುತ್ತಾ ಬಂದಿದೆ.