ಇಂದು ಗಣೇಶ ಚತುರ್ಥಿ. ಹಿಂದೂಗಳು ಆಚರಿಸುವ ಪ್ರಮುಖ ಹಬ್ಬವಿದು. ಪ್ರತಿ ವರ್ಷ ಭಾದ್ರಪದ ಮಾಸ ಶುಕ್ಲಪಕ್ಷದ ಚತುರ್ಥಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.
ಇಂದು (27 ಆಗಸ್ಟ್ 2025) ಪ್ರಪಂಚದಾದ್ಯಂತ ಗಣೇಶ ಚತುರ್ಥಿ ಸಂಭ್ರಮ. ಇಂದು ಯಾವ ಹೊತ್ತಿನಲ್ಲಿ ಗಣಪತಿಗೆ ಪೂಜೆ ಮಾಡಿದರೂ ಶ್ರೇಷ್ಠವೇ. ಆದರೂ ಬೆಳಗ್ಗೆ 11:05 ರಿಂದ ಮಧ್ಯಾಹ್ನ1.40ರವರೆಗಿನ ಅವಧಿ ಗಣೇಶ ಪೂಜೆಗೆ ಶುಭ ಸಮಯ. ಉತ್ತರ ಭಾರತದಲ್ಲಿ ಈ ಗಣೇಶ ಚತುರ್ಥಿ ಆಚರಣೆಗಳು ಸುಮಾರು 10 ದಿನಗಳ ಕಾಲ ನಡೆಯುತ್ತವೆ. ಆದರೆ, ಮನೆಯಲ್ಲಿ ಹತ್ತು ದಿನಗಳ ಕಾಲ ಗಣೇಶನ ವಿಗ್ರಹವನ್ನು ಇಟ್ಟು ಪೂಜೆ ಮಾಡುವುದು ಸಾಧ್ಯವಿಲ್ಲ.
ಹೆಚ್ಚಿನವರು ಒಂದು ದಿನ ಅಥವಾ ಮೂರು ದಿನ ಮಾತ್ರ ಪೂಜಿಸುತ್ತಾರೆ. ಗಣೇಶ ಚತುರ್ಥಿ ಸಮಯದಲ್ಲಿ ಗಣೇಶನ ವಿಗ್ರಹವನ್ನು ಪೂಜಿಸುವುದು ವಾಡಿಕೆ. ಈಗ ವಿವಿಧ ರೀತಿಯ ವಿಗ್ರಹಗಳು ಲಭ್ಯವಿದ್ದರೂ, ಮಣ್ಣಿನಿಂದ ಮಾಡಿದ ವಿಗ್ರಹಗಳಿಗೆ ಮಾತ್ರ ಪೂಜೆ ಮಾಡಬೇಕು. ಇಂದು ಬೆಳಗ್ಗೆ 11:05ರ ನಂತರವಷ್ಟೇ ಗಣೇಶ ಪ್ರತಿಷ್ಠಾಪನೆಗೆ ಶುಭ ಸಮಯ. ಈ ಗಣೇಶ ಮೂರ್ತಿಯನ್ನು ಮನೆಗೆ ತಂದು ಪೂಜಿಸುವುದರಿಂದ, ಜೀವನದ ಎಲ್ಲಾ ಅಡೆತಡೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಗಣಪತಿಯನ್ನು ಮನೆಗೆ ತರಲು ಇಂದು ಬೆಳಗ್ಗೆ 7.33 – 09.09 ಅಥವಾ ಬೆಳಗ್ಗೆ 10.46 ರಿಂದ ಮಧ್ಯಾಹ್ನ 12.22ರ ಸಮಯ ಉತ್ತಮ. ಗಣೇಶನು ಮಧ್ಯಾಹ್ನದ ಸಮಯದಲ್ಲಿ ಜನಿಸಿದನು ಎಂಬ ಪುರಾಣ ಇದೆ. ಆದ್ದರಿಂದ ಮಧ್ಯಾಹ್ನದ ಸಮಯ ಗಣೇಶ ಪೂಜೆಗೆ ಹೆಚ್ಚು ಸೂಕ್ತವೆಂದು ಪರಿಗಣಿಸಲಾಗಿದೆ. ಗಣಪತಿ ಸ್ಥಾಪನಾ ಮುಹೂರ್ತ ಬೆಳಗ್ಗೆ 11:05 AM ರಿಂದ 01:40 PM ಈಶಾನ್ಯ ಮೂಲೆ ಉತ್ತಮ: ಗಣಪತಿ ಮೂರ್ತಿ ಖರೀದಿ ಜತೆ ಅದರ ಸ್ಥಾಪನೆಯೂ ಒಂದು ಪ್ರಮುಖ ಪ್ರಕ್ರಿಯೆಯಾಗಿದ್ದು, ಗಣೇಶನ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ಸ್ಥಾಪಿಸುವುದು ಅವಶ್ಯವಾಗಿದೆ. ಮನೆಯಲ್ಲಿ ಈಶಾನ್ಯ ಮೂಲೆಯನ್ನು ಅತ್ಯಂತ ಮಂಗಳಕರ ಮತ್ತು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ.
ಎಂತಹ ಮೂರ್ತಿ ಶ್ರೇಷ್ಠ? ಮಣ್ಣಿನ ಗಣೇಶ ಮೂರ್ತಿಯನ್ನೇ ಖರೀದಿಸಿ. ಗಣಪತಿ ಬಪ್ಪನ ಸೊಂಡಿಲು ಎಡಭಾಗದಲ್ಲಿರಬೇಕು. ಮನೆಯಲ್ಲಿ ಕುಳಿತ ಭಂಗಿಯಲ್ಲಿರುವ ಗಣೇಶನನ್ನು ಪ್ರತಿಷ್ಠಾಪಿಸುವುದು ಶುಭ. ಸಿಂಧೂರ ಮತ್ತು ಬಿಳಿ ಬಣ್ಣದಲ್ಲಿರುವ ಗಣೇಶನ ವಿಗ್ರಹವು ತುಂಬಾ ಪ್ರಭಾವಶಾಲಿಯಾಗಿದೆ. ವಿಗ್ರಹ ಭಗ್ನವಾಗದಂತೆ ಎಚ್ಚರ ವಹಿಸಿ. ಎಲ್ಲಾ ಪೂಜೆಗಳು ಮುಗಿದ ನಂತರ ವಿಗ್ರಹವನ್ನು ವಿಸರ್ಜನೆ ಮಾಡಬೇಕು. ಈ ರೀತಿ ಮಾಡುವುದರಿಂದ ಎಲ್ಲಾ ದುಃಖಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ.