ಮುಂಬೈ: ಪೈಲಟ್ ತರಬೇತಿ ಸಮಯದಲ್ಲಿ ಯುವತಿ, ಯುವಕನ ನಡುವೆ ಉಂಟಾದ ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿ ಕೊನೆಗೆ ನಾನ್ವೆಜ್ ವಿಚಾರದಲ್ಲಿ ಒಬ್ಬರ ಪ್ರಾಣವನ್ನೇ ಕಸಿದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಸೃಷ್ಟಿ ತುಳಿ (25) ಮತ್ತು ದೆಹಲಿಯ ಆದಿತ್ಯ ಪಂಡಿತ್ (27) ಇಬ್ಬರೂ ಪ್ರೇಮಿಗಳು. ಏರ್ ಇಂಡಿಯಾ ಪೈಲಟ್ ಸೃಷ್ಟಿ ಮೃತದೇಹ ಮುಂಬೈನ ಫ್ಲಾಟ್ನಲ್ಲಿ ಪತ್ತೆಯಾಗಿದೆ.
ಆಕೆಯ ಬಾಯ್ಫ್ರೆಂಡ್ ಆದಿತ್ಯನನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ನಾನ್ ವೆಜ್ ಆಹಾರದ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಆದಿತ್ಯ ಎಲ್ಲರ ಮುಂದೆಯೇ ಸೃಷ್ಟಿಯನ್ನ ನಿಂದಿಸುತ್ತಿದ್ದ. ಇದರಿಂದ ಆಕೆ ತೀವ್ರ ಮನನೊಂದಿದ್ದಳು. ಇಂದಲ್ಲ ನಾಳೆ ಸರಿ ಹೋಗುತ್ತೆ ಎಂದು ಭಾವಿಸಿದ್ದಳು. ಆದರೆ, ಆದಿತ್ಯ ಸ್ವಲ್ಪವೂ ಬದಲಾಗದೇ ನಾನ್ ವೆಜ್ ವಿಚಾರಕ್ಕಾಗಿ ಅನೇಕ ಬಾರಿ ಜಗಳವಾಡಿದ್ದ.
ಹೀಗಿರುವಾಗ ಸೋಮವಾರ ಮುಂಜಾನೆ ಮುಂಬೈನ ಅಂಧೇರಿ (ಪೂರ್ವ) ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್ ಹಿಂಭಾಗದ ಮನೆಯಲ್ಲಿ ಸೃಷ್ಟಿ ಶವವಾಗಿ ಪತ್ತೆಯಾಗಿದೆ. ಸೃಷ್ಟಿಯ ಗೆಳೆಯ ಆದಿತ್ಯ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸೃಷ್ಟಿ ತುಲಿ ಉತ್ತರ ಪ್ರದೇಶ ಮೂಲದವರಾಗಿದ್ದು, ಕಳೆದ ವರ್ಷ ಜೂನ್ನಿಂದ ಮುಂಬೈನಲ್ಲಿ ನೆಲೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವಳು ಮತ್ತು ಆದಿತ್ಯ ಪಂಡಿತ್ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ವಾಣಿಜ್ಯ ಪೈಲಟ್ ಕೋರ್ಸ್ ಓದುತ್ತಿದ್ದಾಗ ಭೇಟಿಯಾದರು ನಂತರ ಸಂಬಂಧವನ್ನು ಹೊಂದಿದ್ದರು. ಆಪಾದಿತ ಆತ್ಮಹತ್ಯೆಯ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಆದಿತ್ಯ ಪಂಡಿತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪವಾಯಿ ಪೊಲೀಸ್ ಠಾಣೆಯ ಪೊಲೀಸರು ಆದಿತ್ಯನ ನವೆಂಬರ್ 29 ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.