ಹರಿಯಾಣ : ಭಾರತದಲ್ಲಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಯುಪಿಎಸ್‌ಸಿ ಕೂಡ ಒಂದು. ಪ್ರತಿ ವರ್ಷ ಸಾವಿರಾರು ಅಭ್ಯರ್ಥಿಗಳು ಈ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಹೀಗೆ ಹರ್ಷಿತಾ ಗೋಯಲ್ ಅವರು 2024ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 2ನೇ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.
ಹರಿಯಾಣದಲ್ಲಿ ಜನಿಸಿದ ಹರ್ಷಿತಾ ಗೋಯಲ್ ಅವರು ಗುಜರಾತ್ ನ ವಡೋದರಾದಲ್ಲಿ ಬೆಳೆದರು. ಅವರು ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿಯನ್ನು ಪೂರ್ಣಗೊಳಿಸಿದರು. ಬಳಿಕ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕರ್ತವ್ಯನಿರ್ವಹಿಸಿದ ಅವರು, ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ.
ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಹರ್ಷಿತಾ ಗೋಯಲ್ ಅವರು ಐಚ್ಛಿಕ ವಿಷಯಗಳಾಗಿ ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಹರ್ಷಿತಾ ಪರೀಕ್ಷೆಯಲ್ಲಿ ಒಟ್ಟು 1038 ಅಂಕಗಳನ್ನು ಗಳಿಸಿದ್ದಾರೆ. ಮುಖ್ಯ ಪರೀಕ್ಷೆಯಲ್ಲಿ 851 ಮತ್ತು ಸಂದರ್ಶನದಲ್ಲಿ 187 ಅಂಕ ಗಳಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ 2025 ರ ಏಪ್ರಿಲ್ 22ರಂದು 2024ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ. ಈ ಬಾರಿ ಶಕ್ತಿ ದುಬೆ ಮೊದಲ ಸ್ಥಾನ ಗಳಿಸಿದ್ದರೆ, ಹರ್ಷಿತಾ ಗೋಯಲ್ ಅವರು ಎರಡನೇ ಸ್ಥಾನ ಗಳಿಸಿದ್ದಾರೆ.