ಹಾಸನದಲ್ಲಿ ಹೃದಯಾಘಾತದ ಸಾವಿನ ಪ್ರಕರಣಗಳು ಏರಿಕೆಯಾಗಿಲ್ಲ ಎಂದು ವರದಿ ನೀಡಿರುವ ತಜ್ಞರ ಸಮಿತಿ, ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅಪಾಯ ಎದುರಿಸುತ್ತಿರುವ ಸಾರ್ವಜನಿಕ ಸಾರಿಗೆ (ಆಟೋ, ಟ್ಯಾಕ್ಸಿ) ಚಾಲಕರಿಗೆ ಹೃದಯ ತಪಾಸಣೆ ಸೇರಿ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಿದೆ.
ಹಾಸನದಲ್ಲಿ ಕಳೆದ ಮೇ, ಜೂನ್ನಲ್ಲಿ ವರದಿಯಾದ ಹೃದಯಾಘಾತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಸೂಚನೆ ಮೇರೆಗೆ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ಗುರುವಾರ ವರದಿ ಬಿಡುಗಡೆ ಮಾಡಿತು.
ಹಾಸನದಲ್ಲಿ 2024ರ ಮೇ, ಜೂನ್ನಲ್ಲಿ ಹೃದಯಾಘಾತದ ಸಾವಿನ 19 ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ ಅದೇ ಅವಧಿಯಲ್ಲಿ 20 ಸಾವಿನ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಹಾಸನ ಸೇರಿ ರಾಜ್ಯದ ಯಾವುದೇ ಭಾಗದಲ್ಲಿ ಹೃದಯಾಘಾತದ ಸಾವಿನ ಪ್ರಕರಣಗಳು ಏಕಾಏಕಿ ಏರಿಕೆಯಾಗಿಲ್ಲ ಎಂದು ತಿಳಿಸಿದೆ. 10 ಮಂದಿಗೆ ಹೃದಯಾಘಾತ. ಹಾಸನದಲ್ಲಿ ವರದಿಯಾದ 24 ಸಾವಿನ ಪ್ರಕರಣಗಳನ್ನು ಅಧ್ಯಯನ ನಡೆಸಿರುವ ಸಮಿತಿ ಅವುಗಳಲ್ಲಿ 10 ಮಂದಿ ಮಾತ್ರವೇ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರಲ್ಲಿ ಮೂವರಿಗೆ ಹೃದಯ ಸಂಬಂಧಿ ಕಾಯಿಲೆಯಿತ್ತು ಎಂದು ತಿಳಿಸಿದೆ.
20 ಮರಣ ಪ್ರಕರಣಗಳಲ್ಲಿ ಶೇ.75 ನಿಖರ ಕಾರಣಗಳನ್ನು ಗುರುತಿಸಲಾಗಿದೆ. ಆದರೆ ಶವ ಪರೀಕ್ಷೆಗೆ ಕುಟುಂಬಸ್ಥರು ಸಹಕಾರ ನೀಡದ ಕಾರಣ ಉಳಿದ ಶೇ.25 ನಿಖರ ಕಾರಣ ತಿಳಿಯಲು ಸಾಧ್ಯವಾಗಿಲ್ಲ. ಯುವಜನರು ಹೃದಯಾಘಾತದಿಂದ ಸಾವನ್ನಪ್ಪಿರುವುದು ಕಳವಳಕಾರಿ. ಇನ್ನು 45 ವರ್ಷದೊಳಗಿನ ಏಳು ಮೃತರಲ್ಲಿ ಅನೇಕರು ಧೂಮಪಾನ, ಮದ್ಯಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆಯ ಕೌಟುಂಬಿಕ ಇತಿಹಾಸ ಹೊಂದಿದ್ದು, ಇವರಲ್ಲಿ ನಾಲ್ವರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.
ಹಾಸನದಲ್ಲಿ ಹೃದಯಾಘಾತದಿಂದ ಮೃತಪಟ್ಟವರಲ್ಲಿ 6 ಮಂದಿ ಆಟೋ ರಿಕ್ಷಾ ಮತ್ತು ಕ್ಯಾಬ್ ಚಾಲಕರಾಗಿದ್ದಾರೆ. ಇದರಿಂದ ಶೇ.30 ಸಾರ್ವಜನಿಕ ಸಾರಿಗೆ ಚಾಲಕರು ಕಿರಿಯ ವಯಸ್ಸಿನಲ್ಲಿಯೇ ಹೃದ್ರೋಗದ ಅಪಾಯ ಎದುರಿಸುತ್ತಿರುವುದು ತಿಳಿದುಬಂದಿದೆ. ಬದಲಾದ ಜೀವನಶೈಲಿ, ಸರಿಯಾಗಿ ಊಟ, ತಿಂಡಿ, ನಿದ್ರೆ ಮಾಡದಿರುವುದು ಸೇರಿ ವಿವಿಧ ಕಾರಣಗಳಿಂದ ಸಮಸ್ಯೆಗಳು ಹೆಚ್ಚುತ್ತಿವೆ. ಹಾಗಾಗಿ ಸಾರ್ವಜನಿಕ ಸಾರಿಗೆ ಚಾಲಕರಿಗೆ ಅವರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹೃದಯ ತಪಾಸಣೆ ಶಿಬಿರಗಳನ್ನು ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ತಜ್ಞರ ಸಮಿತಿಯು ಹೃದಯ ಸಮಸ್ಯೆಗಳ ಅಪಾಯ ಎದುರಿಸುತ್ತಿರುವ ವರ್ಗದವರನ್ನು ಗುರುತಿಸಿ ವರದಿ ಸಲ್ಲಿಸಿದ್ದು, ಕೆಲ ಶಿಫಾರಸು ಮಾಡಿದೆ. ಇದರ ಅನ್ವಯ ತಪಾಸಣೆ ಶಿಬಿರಗಳನ್ನು ನಡೆಸಿ ಹೃದ್ರೋಗ ತಡೆಯಲು ಕ್ರಮವಹಿಸಲಾಗುವುದು.
| ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
ಹಾಸನದಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ಹೆಚ್ಚಳ ಎಂಬ ಮಾಧ್ಯಮದ ವರದಿಯಿಂದಾಗಿ ಆಸ್ಪತ್ರೆಯಲ್ಲಿ ಹೃದಯ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆ ಏರಿಕೆಯಾಗಿದೆ. ಆದರೆ ಹೃದ್ರೋಗ ಪ್ರಕರಣಗಳು ಏರಿಕೆಯಾಗಿಲ್ಲ. ಜನ ಆತಂಕಪಡುವ ಅಗತ್ಯವಿಲ್ಲ.
| ಡಾ.ಕೆ.ಎಸ್. ರವೀಂದ್ರನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ
| ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ
| ಡಾ.ಕೆ.ಎಸ್. ರವೀಂದ್ರನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ