ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ ಸಿಇಟಿ ಬರೆದಿರುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಸಲ್ಲಿಸಿರುವ ಹಲವು ಪ್ರಮಾಣಪತ್ರಗಳ (ಜಾತಿ, ಆದಾಯ, ಕಲ್ಯಾಣ ಕರ್ನಾಟಕ 371ಜೆ) ಸರಿಯಾದ ಆರ್‍ಡಿ ಸಂಖ್ಯೆಯನ್ನು ನಮೂದಿಸಲು ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಜುಲೈ 16ರ ಸಂಜೆ 6 ಗಂಟೆಯವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ನಮೂದಿಸಿರುವ ಆರ್‍ಡಿ ಸಂಖ್ಯೆಯನ್ನು ಕಂದಾಯ ಇಲಾಖೆಯಲ್ಲಿರುವ ಇದೇ ಸಂಖ್ಯೆಯೊಂದಿಗೆ ಆನ್‌ಲೈನ್ ಮೂಲಕ ಪರಿಶೀಲಿಸುವ ಕೆಲಸವನ್ನು ಪ್ರಾಧಿಕಾರವು ಈಗಾಗಲೇ ಮುಗಿಸಿದೆ. ಈ ಹಂತದಲ್ಲಿ ಪ್ರಮಾಣಪತ್ರಗಳು ಅಭ್ಯರ್ಥಿಗಳ ಹೆಸರಿನಲ್ಲಿ ಇಲ್ಲದೆ ಇರುವುದು, ನಿಗದಿತ ನಮೂನೆಗಳಲ್ಲಿ ಇಲ್ಲದಿರುವುದು, ಚಾಲ್ತಿಯಲ್ಲಿ ಇಲ್ಲದೆ ಇರುವುದು ಮುಂತಾದ ಕಾರಣಗಳಿಂದ ಆರ್‍ಡಿ ಸಂಖ್ಯೆ ತಾಳೆಯಾಗದೆ ಸಾವಿರಾರು ಅಭ್ಯರ್ಥಿಗಳ ಅರ್ಜಿಗಳು ತಿರಸ್ಕೃತಗೊಂಡಿವೆ. ಇಂತಹವರ ಹೆಸರುಗಳನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು, ಇಂಥವರಿಗೆ ಸರಿಯಾದ ಆರ್‍ಡಿ ಸಂಖ್ಯೆ ನಮೂದಿಗೆ ಈ ಅವಕಾಶ ನೀಡಲಾಗಿದೆ” ಎಂದಿದ್ದಾರೆ.