ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್‌ಗೆ ಸಂಬಂಧಿಸಿದಂತೆ ವಾರಂಟ್ ಜಾರಿ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಕೇಂದ್ರ ಸಚಿವರಾಗಿ ವಾರದ ಬಳಿಕ ನಿನ್ನೆ (ಶುಕ್ರವಾರ) ಬೆಂಗಳೂರಿಗೆ ಹೆಚ್ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಕೇಸ್ ಇದೆಯಾ ಅಂತಾ ಚೆಕ್ ಮಾಡ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿನ ಹೇಗೆ ಮುಗಿಸಿಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ದೇವೇಗೌಡರ ಕುಟುಂಬವನ್ನು ಮುಗಿಸಿದ್ದಾಯ್ತು, ಅದಕ್ಕಾಗಿ ಏನೆಲ್ಲ ಕುತಂತ್ರ ಮಾಡಿದಿರಿ ಎಂಬುದನ್ನು ನೋಡಿದ್ದಾಯ್ತು. ಈ ಬಗ್ಗೆ ಕಾನೂನು ಹೋರಾಟ ನಡೆಯುತ್ತಿದೆ ಅದು ಅತ್ತ ಇರಲಿ. ಈಗ ಕಾಂಗ್ರೆಸ್, ಯಡಿಯೂರಪ್ಪ ಕುಟುಂಬವನ್ನು ಮುಗಿಸಲು ಹೊರಟಿದೆ. ಅದಕ್ಕಾಗಿ ಪೋಕ್ಸೋ ಕೇಸ್ ನಂತಹ ಷಡ್ಯಂತ್ರ ಮಾಡಿ ಯಡಿಯೂರಪ್ಪ ಅವರನ್ನು ಬಂಧಿಸಲು ಯತ್ನಿಸುತ್ತಿದೆ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿರುವ 82 ವರ್ಷದ ಯಡಿಯೂರಪ್ಪರನ್ನು ಬಂಧಿಸಬೇಕು ಎಂಬ ಹುನ್ನಾರ ನಡೆಸುತ್ತಿರುವ ಕಾಂಗ್ರೆಸ್ ಮುಂದೊಂದು ದಿನ ಸರ್ವನಾಶವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣ ದಾಖಲಾಗಿ 4 ತಿಂಗಳು ಕಳೆದರೂ ಟಚ್ ಮಾಡಲಿಲ್ಲ. ಸಿಐಡಿ ಮುಂದೆ ಹಾಜರಾಗಿ ಯಡಿಯೂರಪ್ಪ ಹೇಳಿಕೆಗಳನ್ನು ನೀಡಿದರೂ ದುರುದ್ದೇಶಪೂರ್ವಕವಾಗಿ ಜಾಮೀನುರಹಿತ ವಾರಂಟ್ ಜಾರಿ ಮಾಡಲಾಗಿದೆ. ಇದು ರಾಜಕೀಯ ದುರುದ್ದೇಶ ಹಾಗೂ ಷಡ್ಯಂತ್ರ ಎಂಬುದು ಸ್ಪಷ್ಟವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.