ಹುಬ್ಬಳ್ಳಿ: ಇತ್ತೀಚೆಗೆ ಹೃದಯಾಘಾತ ಎನ್ನುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಮೊದಲಲ್ಲೆ ವಯಸ್ಕರಿಗೆ ಮಾತ್ರ ಹೃದಯಾಘಾತ ಉಂಟಾಗುತ್ತಿತ್ತು. ಆದರೆ ಇತ್ತೀಚೆಗೆ ಚಿಕ್ಕ ಚಿಕ್ಕ ಮಕ್ಕಳಿಗೆ ಹೃದಯಾಘಾತ ಉಂಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರಲು ಅಸಹಜ ಆಹಾರ ಪದ್ಧತಿ ಹಾಗೂ ಅತಿಯಾದ ಮೊಬೈಲ್ ನೋಡುವುದೇ ಕಾರಣ ಎನ್ನುವುದು ಸಂಶೋಧನೆಯಲ್ಲಿ ತಿಳಿದುಬಂದಿದೆ.ಹೌದು, ಇತ್ತೀಚಿನ ದಿನಗಳಲ್ಲಿ ಹೆತ್ತವರು ಕೇವಲ ಉದ್ಯೋಗ, ದುಡ್ಡು ಎಂದು ದುಡಿಮೆಯ ಕಡೆಗೆ ಹೆಚ್ಚಿನ ಒತ್ತು ನೀಡುವುದರಿಂದ ಮಕ್ಕಳ ಕಡೆಗೆ ಅವರು ಹೆಚ್ಚಿನ ಗಮನ ಕೊಡುವುದಿಲ್ಲ. ಮಕ್ಕಳು ಅಳುತ್ತಾರೆ ಎನ್ನುವ ಕಾರಣಕ್ಕೋ ಅವರಿಂದ ನಮಗೆ ಡಿಸ್ಟರ್ಬ್ ಆಗಬಾರದು ಎನ್ನುವ ಕಾರಣಕ್ಕೋ ಮಕ್ಕಳಿಗೆ ಮೊಬೈಲ್ ಕೊಟ್ಟು ಕೂರಿಸುತ್ತಾರೆ. ಅಲ್ಲದೇ ಬಿಡುವಿಲ್ಲದ ಸಮಯದಲ್ಲಿ ಮಕ್ಕಳಿಗೆ ಸರಿಯಾಗಿ ಆಹರಾವನ್ನು ನೀಡಲು ಸಹ ಅವರಿಗೆ ಸಾಧ್ಯವಾಗುವುದಿಲ್ಲ. ಈ ಎಲ್ಲಾ ಕಾರಣದಿಂದ ಮಕ್ಕಳಲ್ಲಿ ಹೃದಯಾಘಾತ ಹೆಚ್ಚುತ್ತಿದೆ ಎನ್ನುವುನ್ನು ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.
ಈ ಬಗ್ಗೆ ಹುಬ್ಬಳ್ಳಿಯ ಕೆಎಂಸಿ ಆರ್‌ಐ ವೈದ್ಯರು ದೇಶದಲ್ಲಿಯೇ ಪ್ರಥಮ ಸಂಶೋಧನಾ ವರದಿಯನ್ನು ಸಿದ್ಧಪಡಿಸಿದ್ದು, ಈ ಸಂಬಂಧ ಕೆಎಂಸಿ ಆರ್ ಐ ಆಸ್ಪತ್ರೆಯ ಬಹುವಿಭಾಗೀಯ ಸಂಸೊಧನಾ ಘಟಕದ ನೋಡೆಲ್ ಅಧಿಕಾರಿ ಡಾ. ರಾಮ ಕೌಲಗುಡ್ಡ, ಸಮುದಾಯ ಆರೋಗ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಂಜುನಾಥ ನೇಕಾರ, ವಿಜ್ಞಾನಿಗಳಾದ ಡಾ.ಶಿವಕುಮಾರ ಬೇಲೂರು ಮತ್ತು ಡಾ.ಅರುಣ ಶೆಟ್ಟರ ಅವರ ತಂಡ ಧಾರವಾಡ ಜಿಲ್ಲೆಯ ಆರು ಶಾಲೆಗಳ 8 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ತೂಕ ಹೆಚ್ಚಿರುವ ೩೦ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿವಿಧ ರೀತಿಯಲ್ಲಿ ತಪಾಸಣೆಗೆ ಒಳಪಡಿಸಿತ್ತು.ಈ ವೇಳೆ ಬಹುತೇಕ ವಿದ್ಯಾರ್ಥಿಗಳಲ್ಲಿ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಿರುವುದು ಕಂಡುಬಂದಿದೆ.ಇನ್ನು, ಅಧ್ಯಯನಕ್ಕೆ ಒಟಳಪಟ್ಟ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ಹೃದಯಾಘಾತಕ್ಕೆ ಕಾರಣವಾಗುವ ಅಂಶಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಮಕ್ಕಳು ಒಂದರಿಂದ ನಾಲ್ಕು ಗಂಟೆ ಮೊಬೈಲ್ ನೋಡುತ್ತಿದ್ದು, ಅವರ ಆಹಾರ ಕ್ರಮವೂ ಕೂಡ ಸರಿಯಾಗಿಲ್ಲ. ಅಲ್ಲದೇ ಈಗಿನ ಮಕ್ಕಳು ದೈಹಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳದಿರುವುದು ಕೂಡ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ವೈದ್ಯರು ಹೇಳುವ ಪ್ರಕಾರ ಮಕ್ಕಳ ದೈನಂದಿನ ಬದಲಾವಣೆಯಾಗದೇ ಹೋದಲ್ಲಿ ಅವರು ಹೃದಯಾಘಾತಕ್ಕೆ ಹತ್ತಿರವಾಗುತ್ತಾರೆ ಎನ್ನುವ ಆಘಾತಕಾರಿ ಸಂಗತಿಯನ್ನು ಸಂಶೋಧನೆಯ ಮೂಲಕ ತಿಳಿಸಿಕೊಟ್ಟಿದ್ದಾರೆ.
 
				 
         
         
         
															 
                     
                     
                     
                    


































 
    
    
        