ಸಿಯೋಲ್: ದಕ್ಷಿಣ ಕೊರಿಯಾದ ಗ್ಯಾಪ್ಯೊಂಗ್ ಕೌಂಟಿಯಲ್ಲಿ ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, 17 ಮಂದಿ ಸಾವನ್ನಪ್ಪಿದ್ದಾರೆ.
ಮನೆಗಳು ಮತ್ತು ಶಿಬಿರಗಳು ಜಲಾವೃತಗೊಂಡಿದ್ದು, ವಾಹನಗಳು ಪ್ರವಾಹಕ್ಕೆ ಸಿಲುಕಿವೆ. ಹಲವಾರು ಮಂದಿ ನಾಪತ್ತೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬುಧವಾರ ಮಳೆ ಆರಂಭವಾದಾಗಿನಿಂದ ದೇಶಾದ್ಯಂತ ಸಾವಿನ ಸಂಖ್ಯೆ 17 ಕ್ಕೆ ಏರಿದ್ದು, 11 ಮಂದಿ ನಾಪತ್ತೆಯಾಗಿದ್ದಾರೆ. 13,000 ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಗ್ಯಾಪ್ಯೊಂಗ್ನಲ್ಲಿನ ಶಿಬಿರದ ಮೇಲೆ ಭೂಕುಸಿತ ಸಂಭವಿಸಿದೆ. ಈ ಅವಘಡದಲ್ಲಿ 40 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿ, ಇಬ್ಬರು ಕುಟುಂಬ ಸದಸ್ಯರು ಕಾಣೆಯಾಗಿದ್ದಾರೆ. ಇತರ 24 ಜನರು ಭೂಕುಸಿತದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉಕ್ಕಿ ಹರಿಯುತ್ತಿದ್ದ ನದಿಗೆ ಅಡ್ಡಲಾಗಿ ಜಿಪ್-ಲೈನ್ ಮೂಲಕ ಶಿಬಿರದ ಬಳಿ ಒಬ್ಬ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರು, ಹಾನಿಯ ತ್ವರಿತ ಮೌಲ್ಯಮಾಪನಕ್ಕೆ ಸೂಚನೆ ನೀಡಿದ್ದು, ವಿಶೇಷ ವಿಪತ್ತು ವಲಯಗಳನ್ನು ತ್ವರಿತವಾಗಿ ಗುರುತಿಸುವಂತೆ ಆದೇಶ ಹೊರಡಿಸಿದ್ದಾರೆ.