ಬೆಂಗಳೂರು :ಕರ್ನಾಟಕದಲ್ಲಿ ಪೊಲೀಸ್ ಕಾನ್‌ಸ್ಟೆಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳು ಇನ್ನು ಮುಂದೆ ಸ್ಲೋಚ್ ಟೋಪಿಗಳ ಬದಲಿಗೆ ನೇವಿ ಬ್ಲೂ ಪೀಕ್ ಕ್ಯಾಪ್‌ಗಳನ್ನು ಧರಿಸಲಿದ್ದಾರೆ. ಈ ಮೂಲಕ ಕರ್ನಾಟಕ ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಾಲಿ ಧರಿಸುತ್ತಿದ್ದ ಸ್ಲೌಚ್ ಹ್ಯಾಟ್ಗೆ ರಾಜ್ಯ ಸರ್ಕಾರ ಗುಡ್ ಬೈ ಹೇಳಿ ಇಂದಿನಿಂದ ನೇವಿ ಬ್ಲೂ ಪೀಕ್ ಕ್ಯಾಪ್‌ಗಲ್ಲಿ ಪೇದೆಗಳು ಕಾಣಿಸಿಕೊಳ್ಳಲಿದ್ದಾರೆ.
ಈ ಹೊಸ ಮಾದರಿಯ ಕ್ಯಾಪ್‌ಗಳು ತೆಲಂಗಾಣ ಪೊಲೀಸ್ ಯೂನಿಫಾರಂನಿಂದ ಪ್ರೇರಿತವಾಗಿದ್ದು, ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಹ್ಯಾಟ್ ಇತಿಹಾಸದ ಪುಟ ಸೇರಿದೆ.
ಹಿಂದೆ ಕರ್ನಾಟಕದ ಕಾನ್‌ಸ್ಟೆಬಲ್ ಮತ್ತು ಹೆಡ್ ಕಾನ್‌ಸ್ಟೆಬಲ್ ಸ್ಲೋಚ್ ಹ್ಯಾಟ್ ಕ್ಯಾಪ್‌ಗಳನ್ನು ಹಾಕುತ್ತಿದ್ದರು. ಇದೀಗ ಇದರಲ್ಲಿ ಬದಲಾವಣೆಯನ್ನು ತಂದಿದ್ದು, ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಇಂದು ಈ ಹೊಸ ಕ್ಯಾಪ್‌ಗಳು ನೀಡಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳು ವಿವಿಧ ರಾಜ್ಯಗಳ ಪೋಲಿಸ್ ಕ್ಯಾಪ್ ಮಾದರಿಗಳನ್ನು ಪರಿಶೀಲಿಸಿ, ಅಂತಿಮವಾಗಿ ತೆಲಂಗಾಣ ಮಾದರಿಯ ಕ್ಯಾಪ್‌ಗಳನ್ನು ಕರ್ನಾಟಕದ ಕಾನ್ಸ್‌ಟೇಬಲ್‌ಗಳಿಗೆ ಒದಗಿಸಲು ತೀರ್ಮಾನಿಸಿದ್ದರು. ತೆಲಂಗಾಣ ಮಾದರಿಯ ನೇವಿ ಬ್ಲೂ ಕ್ಯಾಪ್‌ಗಳು ಸೂಕ್ತ ವಿನ್ಯಾಸ, ಉತ್ತಮ ಫಿಟ್ ಮತ್ತು ವೃತ್ತಿಪರ ಆಕರ್ಷಣೆ ಹೊಂದಿರುವ ಕಾರಣ ಇದೇ ಮಾದರಿ ಬಗ್ಗೆ ಕರ್ನಾಟಕ ಸರ್ಕಾರ ಒಲವು ತೋರಿತ್ತು.
ಸ್ಲೌಚ್ ಹ್ಯಾಟ್ಗಳ ಬಳಕೆ ಉಸಿರಾಟದ ತೊಂದರೆಗೆ ಕಾರಣವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯ ವರದಿಗಳು ಹೇಳಿದ್ದವು. ಅಲ್ಲದೆ ಇವುಗಳನ್ನು ಧರಿಸುವುದರಿಂದ ತಲೆ ಭಾಗದಲ್ಲಿ ಗಾಳಿಯ ಸಂಚಾರದ ಕೊರತೆಯೂ ಉಂಟಾಗಿ ಕಾನ್ಸ್‌ಟೇಬಲ್‌ಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಕೊಳ್ಳುತ್ತಿದ್ದವು. ಪ್ರತಿಭಟನೆಗಳು, ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಈ ಮಾದರಿಯ ಹ್ಯಾಟ್ಗಳು ಅನುಕೂಲಕರವಾಗಿಲ್ಲ. ಅದರ ಗಾತ್ರ ಮತ್ತು ಆಕಾರದಿಂದ ಅದು ಬಿದ್ದುಹೋಗುವ ಅಥವಾ ಜಾರುವ ಸಾಧ್ಯತೆ ಹೆಚ್ಚಿದೆ ಎಂದು ದೂರು ಬಂದಿತ್ತು. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್ಗಳನ್ನ ರಾಜ್ಯ ಸರ್ಕಾರ ಬದಲಾಯಿಸಿದೆ.
ಕರ್ನಾಟಕದ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದ್ದು, 1980–83ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಕಾಲದಲ್ಲಿ ಇವು ಪರಿಚಯಿಸಲ್ಪಟ್ಟವು. ಅಂದಿನ ನೀಲಿ ಮತ್ತು ಕೆಂಪು ಪಟ್ಟಿಯ ಪೇಟದ ಬದಲಿಗೆ ಈ ಕ್ಯಾಪ್‌ಗಳು ದಿನನಿತ್ಯದ ಕರ್ತವ್ಯಕ್ಕಾಗಿ ಅಳವಡಿಸಿಕೊಳ್ಳಲಾಯಿತು.

































