ನಾಗ್ಪುರ : ನಾಗ್ಪುರ–ಜಬಲ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದ ಬಳಿಕ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡ ಪತಿ, ಸಹಾಯ ಸಿಗದ ಕಾರಣ, ಪತ್ನಿಯ ಮೃತದೇಹವನ್ನು ತನ್ನ ಬೈಕ್‌ಗೆ ಕಟ್ಟಿಕೊಂಡು ಸಾಗಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮೃತ ಮಹಿಳೆಯನ್ನು ಗ್ಯಾರಸಿ ಯಾದವ್ ಎಂದು ಗುರುತಿಸಲಾಗಿದೆ. ಪತಿ ಅಮಿತ್ ಭುರಾ ಯಾದವ್ (35) ನೀಡಿದ ಮಾಹಿತಿ ಪ್ರಕಾರ, ಅವರಿಬ್ಬರೂ ಮಧ್ಯಪ್ರದೇಶದ ಸಿಯೋನಿ ಮೂಲದವರು ಆಗಿದ್ದು, ಕಳೆದ 10 ವರ್ಷಗಳಿಂದ ನಾಗ್ಪುರದಲ್ಲಿ ವಾಸವಾಗಿದ್ದರು. ರಕ್ಷಾ ಬಂಧನದ ನಿಮಿತ್ತ ತಮ್ಮ ಊರಿಗೆ ತೆರಳುವ ವೇಳೆ ಈ ದುರಂತ ಸಂಭವಿಸಿದೆ. ಅಮಿತ್ ಮಾತನಾಡುತ್ತಾ, “ಅಪಘಾತದ ಬಳಿಕ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದೆ. ಸಹಾಯ ಮಾಡುವವರು ಯಾರೂ ದೊರೆಯಲಿಲ್ಲ. ನಾನು ಏನು ಮಾಡಬೇಕೆಂಬುದೇ ತಿಳಿಯಲಿಲ್ಲ,” ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ವೇಗವಾಗಿ ಬಂದ ಟ್ರಕ್ ಅವರ ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ, ಪತ್ನಿ ಟ್ರಕ್‌ನ ಚಕ್ರಗಳಡಿ ಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪರಿಣಾಮ, ದುಃಖದ ಶೋಕದಲ್ಲಿ ಮುಳುಗಿದ ಅಮಿತ್ ಬೈಕ್‌ನ ಹಿಂಬದಿ ಸೀಟಿನಲ್ಲಿ ಪತ್ನಿಯ ಮೃತದೇಹವನ್ನು ಮಲಗಿಸಿ, ಆಕೆಯನ್ನು ಮನೆಗೆ ಕೊಂಡೊಯ್ಯಲು ನಿರ್ಧಾರ ಮಾಡಿದ್ದಾರೆ. ಈ ಭೀಕರ ದೃಶ್ಯವನ್ನು ಹಿಂಬಾಲಿಸುತ್ತಿದ್ದ ಕಾರಿನಲ್ಲಿದ್ದ ವ್ಯಕ್ತಿಗಳು ಸೆರೆಹಿಡಿದಿದ್ದು, ಅವರು ನಿಲ್ಲುವಂತೆ ಕೇಳಿದರೂ, ಅಮಿತ್ ನಿಲ್ಲದೆ ಮುಂದಕ್ಕೆ ಸಾಗಿದರು ಎನ್ನಲಾಗಿದೆ. ಹೆದ್ದಾರಿ ಪೊಲೀಸರು ಅಮಿತ್ ಬೈಕ್ ಅನ್ನು ತಡೆದು, ಪತ್ನಿಯ ಮೃತದೇಹವನ್ನು ವಶಕ್ಕೆ ಪಡೆದರು. ನಂತರ ಮೃತದೇಹವನ್ನು ನಾಗ್ಪುರದ ಮೇಯೊ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.