ಬೆಂಗಳೂರು: ಬಗರ್ ಹುಕುಂ ಅರ್ಜಿಗಳನ್ನು ಬೇಗನೆ ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು ಮಾಡಬೇಕು ಎಂದು ತಹಸಿಲ್ದಾರ್ ಗಳಿಗೆ ಸೂಚನೆ ನೀಡಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬಗರ್ ಹುಕುಂ ನಮೂನೆ 57ರ ಅಡಿಯಲ್ಲಿ ಒಟ್ಟಾರೆ 9.80 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ ಅನರ್ಹ ಅರ್ಜಿಗಳೇ ಹೆಚ್ಚಾಗಿವೆ. ಈ ಅರ್ಜಿಗಳ ವಿಲೇವಾರಿಗೆ 160 ಬಗರ್ ಹುಕುಂ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಪ್ರತಿ ತಿಂಗಳು ಕನಿಷ್ಠ ಮಟ್ಟದ ಅರ್ಜಿ ವಿಲೇವಾರಿಯಾಗಬೇಕು. ಮುಂದಿನ 8 ತಿಂಗಳಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಅರ್ಹರಿಗೆ ಭೂಮಿ ಮಂಜೂರು ಮಾಡಲು ತಿಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಸಂಪೂರ್ಣ ಮತ್ತು ಕನಿಷ್ಠ ದಾಖಲೆ ಹೊಂದಿದ ರೈತರಿಗೆ ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ದರ್ಖಾಸ್ತು ಪೋಡಿ ಮಾಡಿಕೊಡಲಾಗುವುದು. ಈಗಾಗಲೇ ದರ್ಖಾಸ್ತು ಪೋಡಿ ಬಾಕಿ ಕೆಲಸ ಅಭಿಯಾನ ಆರಂಭಿಸಲಾಗಿದೆ. ರಾಜ್ಯದಲ್ಲಿ 22 ಲಕ್ಷ ಖಾಸಗಿ ಸರ್ವೇ ನಂಬರ್ ಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಾಲೀಕರಿದ್ದು, ಖಾಸಗಿ ಸರ್ವೇ ನಂಬರ್ ಪೋಡಿಗೂ ಅಭಿಯಾನ ನಡೆಸಲಾಗುತ್ತದೆ. ಪ್ರತ್ಯೇಕ ಪಹಣಿ ಮಾಡಿಕೊಡಬೇಕಾಗಿರುವುದು ಕಂದಾಯ ಇಲಾಖೆಯ ಮೂಲ ಕರ್ತವ್ಯವಾಗಿದ್ದು, ಇದುವರೆಗೆ ಆ ಕೆಲಸವಾಗದ ಕಾರಣ ಪೋಡಿ ಮಾಡಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.