ಬೆಂಗಳೂರು : ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡುಗಳಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ H5N1 ವೈರಸ್ ಕುರಿತ ಆತಂಕ ಆರಂಭವಾಗಿದೆ. ತಮಿಳುನಾಡಿನಲ್ಲಿ ಹಕ್ಕಿ ಜ್ವರದಿಂದ 1,500ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿರುವುದು ದೃಢಪಟ್ಟಿದ್ದು, ಇತ್ತ ಮಹಾರಾಷ್ಟ್ರದಲ್ಲೂ ವೈರಸ್ ಹರಡುವ ಲಕ್ಷಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸುವಂತೆ ಪಶುಸಂಗೋಪನಾ ಇಲಾಖೆ ಸೂಚಿಸಿದ್ದು, ತಡೆಗಟ್ಟುವ ಕ್ರಮಗಳನ್ನು ಚುರುಕುಗೊಳಿಸಲಾಗಿದೆ.
ಹಕ್ಕಿ ಜ್ವರವು H5N1 ವೈರಸ್‌ನಿಂದ ಪಕ್ಷಿಗಳಲ್ಲಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಸೋಂಕಿತ ಹಕ್ಕಿಗಳ ನೇರ ಸಂಪರ್ಕ, ಲಾಲಾರಸ ಅಥವಾ ಮಲದ ಮೂಲಕ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಸೋಂಕಿತ ಪ್ರಾಣಿಗಳ ಮೂಗು ಅಥವಾ ಬಾಯಿಯಿಂದ ಹೊರಬರುವ ಸ್ರವಗಳಿಂದ ವೈರಸ್ ತಗುಲುವ ಅಪಾಯ ಹೆಚ್ಚಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಸಾಮಾನ್ಯವಾಗಿ ಸೋಂಕಿತ ಹಕ್ಕಿಯ ಸಂಪರ್ಕಕ್ಕೆ ಬಂದ 4 ರಿಂದ 6 ದಿನಗಳೊಳಗೆ ಮಾನವರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ.
ಮಾನವರಲ್ಲಿ ಹಕ್ಕಿ ಜ್ವರ ತಗುಲಿದರೆ ಜ್ವರ, ಕೆಮ್ಮು, ಗಂಟಲು ನೋವು, ಉಸಿರಾಟದಲ್ಲಿ ತೊಂದರೆ, ಕಣ್ಣು ಕೆಂಪಾಗುವುದು ಮತ್ತು ಕಿರಿಕಿರಿ, ಸ್ನಾಯು ಅಥವಾ ದೇಹ ನೋವು, ತಲೆನೋವು ಹಾಗೂ ಆಯಾಸ ಕಾಣಿಸಿಕೊಳ್ಳಬಹುದು. ಗಂಭೀರ ಸ್ಥಿತಿಯಲ್ಲಿ ನ್ಯೂಮೋನಿಯಾ ಉಂಟಾಗುವ ಸಾಧ್ಯತೆಯೂ ಇದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆ.ಸಿ. ಜನರಲ್ ಆಸ್ಪತ್ರೆಯ ವೈದ್ಯರಾದ ಡಾ. ಸುರೇಶ್, ಪೌಲ್ಟ್ರಿ ಹಾಗೂ ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸೋಂಕು ತಗುಲುವ ಅಪಾಯ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಹಕ್ಕಿ ಜ್ವರಕ್ಕೆ ತುತ್ತಾದವರಲ್ಲಿ ಸಾವಿನ ಪ್ರಮಾಣ ಶೇ.50ರಷ್ಟಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಅವರು ಎಚ್ಚರಿಸಿದ್ದಾರೆ. ಸೋಂಕು ವ್ಯಾಪಕವಾದರೆ ಇದು ಸಾಂಕ್ರಾಮಿಕ ರೂಪ ಪಡೆಯುವ ಸಾಧ್ಯತೆಯೂ ಇದೆ ಎಂದು ತಿಳಿಸಿದ್ದಾರೆ.
ಅರೆಬೆಂದ ಅಥವಾ ಸೆಮಿ ಬಾಯ್ಲ್ಡ್ ಆಹಾರ ಸೇವನೆ ಕುರಿತು ಜನರು ಎಚ್ಚರ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದು, ಅರೆಬೆಂದ ಮಾಂಸಾಹಾರದಿಂದ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕೈಗಳ ಸ್ವಚ್ಛತೆ ಸೇರಿದಂತೆ ಹ್ಯಾಂಡ್ ಹೈಜಿನ್ ಪಾಲನೆ ಅತ್ಯಂತ ಅಗತ್ಯವಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಹಕ್ಕಿ ಜ್ವರ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಹಾಗೂ ಪಶುಸಂಗೋಪಾನ ಇಲಾಖೆ ಸಂಯುಕ್ತವಾಗಿ ನಿಗಾ ವಹಿಸಿದ್ದು, ಗಡಿ ಜಿಲ್ಲೆಗಳಲ್ಲಿ ಮೇಲ್ವಿಚಾರಣೆ ಮತ್ತಷ್ಟು ಕಠಿಣಗೊಳಿಸಲಾಗಿದೆ.

































