ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ವಕ್ಫ್ ಮಂಡಳಿಗೆ ಅಧಿಕಾರ ನೀಡಿ ರಾಜ್ಯ ಸರ್ಕಾರ ನೀಡಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿದಾರರ ಆಕ್ಷೇಪವನ್ನು ಪುಷ್ಟೀಕರಿಸುವ ಪ್ರಬಲ ಕಾರಣ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ, ರಾಜ್ಯ ಸರ್ಕಾರ ವಕ್ಫ್ ಮಂಡಳಿ ಮತ್ತು ಅದರ ಅಧಿಕಾರಿಗಳಿಗೆ ಮುಸ್ಲಿಂ ದಂಪತಿಗಳ ವಿವಾಹ ಪ್ರಮಾಣಪತ್ರ ವಿತರಿಸಲು ನೀಡಿರುವ ಅನುಮತಿಯನ್ನು 7-01-2025ರ ವರೆಗೆ ಅಮಾನತ್ತಿನಲ್ಲಿ ಇಡಲಾಗಿದೆ ಎಂದು ಆದೇಶ ಹೊರಡಿಸಿತು.
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಸರ್ಕಾರದ ಆದೇಶವನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.ವಕ್ಫ್ ಮಂಡಳಿಗಳಿಗೆ ಮುಸ್ಲಿಂ ವಿವಾಹಗಳನ್ನು ಕಡ್ಡಾಯವಾಗಿ ನೋಂದಾಯಿಸುವ ಯಾವುದೇ ಶಾಸನಾತ್ಮಕ ಅಧಿಕಾರ ಇಲ್ಲ ಎಂದು ಆಕ್ಷೇಪಿಸಿ ಎ. ಆಲಂ ಪಾಷಾ ಅವರು ಹೈಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.