ಉತ್ತರಕನ್ನಡದ ಗೋಕರ್ಣದ ಗುಹೆಯೊಂದರಲ್ಲಿ ಪತ್ತೆಯಾದ ರಷ್ಯಾದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಗಡಿಪಾರು ಮಾಡುವ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ತಡೆಹಿಡಿದಿದ್ದು, ತಕ್ಷಣದ ಗಡೀಪಾರು ಸಮಂಜಸವಲ್ಲ ಎಂದು ಆದೇಶಿಸಿದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ (ಯುಎನ್‌ಆರ್‌ಸಿ) ನಿರ್ಣಯಗಳನ್ನು ಪರಿಗಣಿಸುವ ಅಗತ್ಯದ ಬಗ್ಗೆ ಉಲ್ಲೇಖಿಸಿರುವ ಹೈಕೋರ್ಟ್, ಮಹಿಳೆ ಹಾಗೂ ಮಕ್ಕಳ ಗಡೀಪಾರು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ನೀಡಿದೆ.
ಗಡಿಪಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು, ಗುಹೆಯಲ್ಲಿ ಸಿಕ್ಕ ಮಕ್ಕಳಾದ ಪ್ರೇಯ (6) ಮತ್ತು ಅಮಾ (4) ಅವರ ಯಾವುದೇ ಗುರುತಿನ ದಾಖಲೆಗಳಿಲ್ಲ. ಹೀಗಾಗಿ ತಕ್ಷಣ ಗಡಿಪಾರು ಮಾಡಿದರೆ ಅವರ ಜೀವನಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮಹಿಳೆ ಹಾಗೂ ಮಕ್ಕಳಾದ ಪ್ರೇಯ (6) ಮತ್ತು ಅಮಾ (4) ಅವರ ತಕ್ಷಣದ ಗಡೀಪಾರು ಸಮಂಜಸವಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಜೊತೆಗೆ ಯಾವುದೇ ಗಡೀಪಾರು ಯೋಜನೆಯನ್ನು ಪೂರ್ವ ಸೂಚನೆಯಿಲ್ಲದೆ ಕಾರ್ಯಗತಗೊಳಿಸಲಾಗದು ಎಂದು ಪೀಠ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೂರ್ಣ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿರುವುದರಿಂದ ಪೀಠವು ಅಧಿಕಾರಿಗಳಿಗೆ ಎರಡು ವಾರಗಳಲ್ಲಿ ತಮ್ಮ ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಿತು. ಆಗಸ್ಟ್ 18ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಆಗಸ್ಟ್ 18ರ ವರೆಗೆ ಯಾವುದೇ ರೀತಿಯ ಗಡಿಪಾರು ಕ್ರಮ ಕೈಗೊಳ್ಳದಂತೆ ಪೀಠ ಖಡಕ್ ಎಚ್ಚರಿಕೆ ನೀಡಿದೆ. ಜೊತೆಗೆ ಪ್ರತಿವಾದಿಗಳು ಮಕ್ಕಳ ಬಗ್ಗೆ ಸಮರ್ಪಕ ದಾಖಲೆಗಳು ಲಭ್ಯವಿಲ್ಲದಿರುವ ಬಗ್ಗೆ ದೃಢೀಕರಿಸುವ ಲಿಖಿತ ಅಫಿಡವಿಟ್ ಸಲ್ಲಿಸಬೇಕು. ಜೊತೆಗೆ, ಎರಡು ವಾರಗಳಲ್ಲಿ ತಮ್ಮ ಆಕ್ಷೇಪಣೆ ಸಲ್ಲಿಸಬೇಕು ಎಂದು ಪೀಠವು ನಿರ್ದೇಶಿಸಿದೆ.
ಅರ್ಜಿದಾರರ ಪರವಾಗಿ ವಕೀಲ ಬೀನಾ ಪಿಳ್ಳೆ ಅವರು ಪ್ರತಿನಿಧಿಸಿದ್ದು, ಈ ಗಡೀಪಾರು ಕ್ರಮವು ಮಕ್ಕಳ ಹಿತಾಸಕ್ತಿಯನ್ನು ಲೆಕ್ಕಿಸದೆ, ಯುಎನ್‌ಸಿಆರ್‌ಸಿಯ ತತ್ವಗಳನ್ನು ಉಲ್ಲಂಘಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸದ್ಯ ಮೂವರನ್ನು ತುಮಕೂರಿನ ಮಹಿಳಾ ಆಶ್ರಯ ಕೇಂದ್ರದಲ್ಲಿ ಇರಿಸಲಾಗಿದೆ.
 
				 
         
         
         
															 
                     
                     
                     
                     
                    


































 
    
    
        