ಉತ್ತರಾಖಂಡ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಯನ್ನು ಹಿಮಾಂಶು ಗುಪ್ತಾ ಅವರು ಯಾವುದೇ ತರಬೇತಿ ಇಲ್ಲದೆ ಮೂರು ಬಾರಿ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಸಿಬಿಎಸ್ಸಿ ಹೊಸ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಐಎಎಸ್ ಅಧಿಕಾರಿ ಹಿಮಾಂಶು ಗುಪ್ತಾ ಅವರ ಯಶೋಗಾಥೆ ಇದು
ಉತ್ತರಾಖಂಡದ ಸೀತಾರಗಂಜ್ ಜಿಲ್ಲೆಯ ಹಿಮಾಂಶು ಗುಪ್ತಾ, ಬಾಲ್ಯದಿಂದಲೂ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹಿಮಾಂಶು ಅವರ ತಂದೆ ದೈನಂದಿನ ಕೂಲಿ ಕಾರ್ಮಿಕರಾಗಿದ್ದರಿಂದ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿತ್ತು. ಹಿಮಾಂಶು ಅವರ ತಂದೆಯ ಗಳಿಕೆಯು ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿರಲಿಲ್ಲ. ಹೀಗಾಗಿ, ಹಿಮಾಂಶು ಶಾಲೆ ಮುಗಿದ ನಂತರ ಪ್ರತಿದಿನ ತಮ್ಮ ತಂದೆಯ ಟೀ ಅಂಗಡಿಯಲ್ಲಿ ಸಹಾಯ ಮಾಡುತ್ತಾ, ಕುಟುಂಬದ ಆದಾಯಕ್ಕೆ ನೆರವಾಗುತ್ತಿದ್ದರು.
ಹಿಮಾಂಶು ಅವರು ತಮಗೆ ಮೂಲಭೂತ ಇಂಗ್ಲಿಷ್ ಶಿಕ್ಷಣ ಪಡೆಯಲು ಪ್ರತಿದಿನ 70 ಕಿ.ಮೀ. ಪ್ರಯಾಣಿಸಬೇಕಾಗಿತ್ತು. ಅವರು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಟ್ಯೂಷನ್ ತರಗತಿಗಳನ್ನು ನೀಡಲು ಪ್ರಾರಂಭಿಸಿದರು.
ಈ ಎಲ್ಲಾ ಸವಾಲುಗಳ ನಡುವೆಯೂ, ಹಿಮಾಂಶು ತಮ್ಮ 10 ಮತ್ತು 12 ನೇ ತರಗತಿಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿಗೆ ಪ್ರವೇಶ ಪಡೆದರು. ಕುಟುಂಬವನ್ನು ಬೆಂಬಲಿಸಲು, ಅವರು ಸರ್ಕಾರಿ ಕಾಲೇಜಿನಲ್ಲಿ ಸಂಶೋಧನಾ ವಿದ್ವಾಂಸರಾಗಿಯೂ ಕೆಲಸ ಮಾಡಿದರು.
ಕೋಚಿಂಗ್ ಇಲ್ಲದೆ ಮೂರು ಬಾರಿ ಯುಪಿಎಸ್ಸಿ ಪಾಸ್!
ಹಿಮಾಂಶು ಗುಪ್ತಾ ಅವರು ಯಾವುದೇ ತರಬೇತಿ ಇಲ್ಲದೆ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 2018ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಅವರು, ಐಆರ್ಟಿಎಸ್ ಗೆ ಆಯ್ಕೆಯಾದರು. 2019 ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತಿರ್ಣರಾದ ಅವರು 309 ನೇ ರ್ಯಾಂಕ್ ಪಡೆದು ಐಪಿಎಸ್ ಹುದ್ದೆ ಪಡೆದರು. ಆದಾಗ್ಯೂ, ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಅವರು, ಮೂರನೇ ಬಾರಿಗೆ ಪರೀಕ್ಷೆ ಬರೆಯುತ್ತಾರೆ. 2020 ರಲ್ಲಿ ಮೂರನೇ ಬಾರಿಗೆ ಪರೀಕ್ಷೆ ಬರೆದ ಅವರು, 139 ನೇ ರ್ಯಾಂಕ್ ನೊಂದಿಗೆ ಐಎಎಸ್ ಅಧಿಕಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ.
2023 ರಲ್ಲಿ, ಅವರನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) ಹೊಸ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕೃತ ಆದೇಶದ ಪ್ರಕಾರ ಅವರನ್ನು ಸಿಬಿಎಸ್ಸಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.