ಬೆಂಗಳೂರು : ‘ಮನೆ ಮನೆಗೆ ಪೊಲೀಸ್’ ಯೋಜನೆಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಬೆಂಗಳೂರಿನಲ್ಲಿ ಶುಕ್ರವಾರ ಚಾಲನೆ ನೀಡಿದರು.
ಯೋಜನೆಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, “ಮನೆ ಮನೆಗೆ ಪೊಲೀಸರು ಭೇಟಿ ನೀಡುವ ಯೋಜನೆ ಇಡೀ ದೇಶದಲ್ಲಿ ಇದೇ ಮೊದಲು. ಈ ವಿನ್ಯಾಸದ ಕಾರ್ಯಕ್ರಮದ ಮೂಲಕ, ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನು ಸಂಬಂಧಿತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಪೊಲೀಸ್ ಇಲಾಖೆಗೆ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲು ಸಹಾಯವಾಗಲಿದೆ” ಎಂದು ತಿಳಿಸಿದರು.
“ಪೊಲೀಸರು ಜನಸ್ನೇಹಿ ಆಗಬೇಕು ಎಂದು ಈ ಕಾರ್ಯಕ್ರಮ ಪ್ರಾರಂಭಿಸುತ್ತಿದ್ದೇವೆ. ನಾವೇ ಜನರ ಮನೆ ಬಾಗಿಲಿಗೆ ಕಷ್ಟ ಕೇಳೋಣ ಅಂತ ತೀರ್ಮಾನ ಮಾಡಿದ್ದೇವೆ. ಪ್ರತಿ ಠಾಣೆಯ ಲಿಮಿಟ್ಸ್ ನಲ್ಲಿ ಈ ಕೆಲಸ ಆಗಬೇಕು. ಬೀಟ್ ಪೊಲೀಸರು ಈ ಕೆಲಸವನ್ನು ಮಾಡಬೇಕು. ಯಾರ ಮನೆಯಲ್ಲಿ ಯಾರಿದ್ದಾರೆ, ಹೊಸದಾಗಿ ಬಂದಿದ್ದಾರ, ಬಾಡಿಗೆಗೆ ಇದ್ದಾರೆಯೇ, ಅವರು ಏನ್ ಕೆಲಸ ಮಾಡ್ತಾರೆ ಎಂಬ ಮಾಹಿತಿ ಕಲೆಹಾಕಿದ್ರೆ ಇಡೀ ಬೆಂಗಳೂರು ಡೇಟಾ ಬ್ಯಾಂಕ್ ನಮ್ಮ ಬಳಿ ಇರುತ್ತದೆ. ಪೊಲೀಸರು ಬಂದಾಗ ಜನರು ಕಷ್ಟಸುಖ ಹೇಳಬಹುದು. ಏನಾದ್ರೂ ತೊಂದರೆ ಆಗ್ತಾ ಇದ್ದರೆ ಹೇಳಬಹುದು. ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಮಾಹಿತಿ ನೀಡಬಹುದು. ಜನಸ್ನೇಹಿ ಪೊಲೀಸರ ಜೊತೆಗೆ ಶಾಂತಿ ಕಾಪಾಡಲು ಈ ಕಾರ್ಯಕ್ರಮ ಸಹಾಯ ಆಗುತ್ತದೆ. ನಿಮ್ಮ ಮನೆಗೆ ಬಂದಾಗ ನಿಮ್ಮ ಹೆಸರನ್ನು ನಮೂದಿಸಿಕೊಳ್ಳುತ್ತಾರೆ. ಬಳಿಕ ಅದನ್ನ ಡಿಜಿಟಲೈಸ್ ಮಾಡಿ ಇಟ್ಟುಕೊಳ್ಳುತ್ತಾರೆ” ಎಂದು ಮಾಹಿತಿ ನೀಡಿದರು.
ಈ ಯೋಜನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬೆಂಗಳೂರು ಆಗ್ನೇಯ ಡಿಸಿಪಿ, “ಮನೆ ಮನೆಗೆ ಪೊಲೀಸ್’ ನಿಮ್ಮ ರಕ್ಷಕರು, ನಿಮ್ಮ ಮನೆ ಬಾಗಿಲಿಗೆ! ನಿಮ್ಮ ಪೊಲೀಸ್ ಇಲಾಖೆ ಸಂಬಂಧಿತ ಸಮಸ್ಯೆಗಳನ್ನು ಆಲಿಸಿ, ದೂರುಗಳನ್ನು ದಾಖಲಿಸಲು ಮತ್ತು ನಿಮ್ಮ ಮೌಲ್ಯಯುತ ಸಲಹೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಸಮಾಜದಲ್ಲಿ ನಿರ್ಭಯ ವಾತಾವರಣವನ್ನು ಸೃಷ್ಟಿಸುವ ಜೊತೆಗೆ ರಕ್ಷಣೆ ಮತ್ತು ಸುರಕ್ಷತೆ ಒದಗಿಸುವ ಗುರುತರವಾದ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿವೆ. ಪೊಲೀಸ್ ಸೇವೆಗಳ ಪ್ರತಿಯೊಂದು ಸ್ತರದಲ್ಲೂ ಸಾರ್ವಜನಿಕರ ಬೆಂಬಲ ಮತ್ತು ಸಹಭಾಗಿತ್ವ ಸಾಧಿಸಿಕೊಳ್ಳುವುದರಿಂದ ಮಾತ್ರವೇ ಉತ್ಕೃಷ್ಟ ಸೇವೆಯನ್ನು ಒದಗಿಸಲು ಸಾಧ್ಯ ಆ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಪೊಲೀಸ್ ಠಾಣಾ ಸರಹದ್ದುಗಳನ್ನು ಸಬ್-ಬೀಟ್‌ಗಳಿಗೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.