ಬೆಂಗಳೂರು: ಗೃಹ ಸಚಿವ ಜಿ.ಪರಮೇಶ್ವರ್ ಒಡೆತನದ ಸಂಸ್ಥೆಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಇ.ಡಿ ದಾಳಿ ನಡೆಸಿದೆ. ತುಮಕೂರಿನಲ್ಲಿರುವ ಸಿದ್ದಾರ್ಥ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಅಲ್ಲದೆ ನೆಲಮಂಗಲದ ಟಿ ಬೇಗೂರು ಬಳಿ ಇರುವ ಕಾಲೇಜು ಮೇಲೂ ಇಡಿ ದಾಳಿ ನಡೆದಿದೆ. 9 ಕಾರುಗಳಲ್ಲಿ ಬಂದಿರುವ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಕನ್ನಡ ನಟಿ ರನ್ಯಾ ರಾವ್ ಒಳಗೊಂಡಿರುವ ಗೋಲ್ಡ್ ಸ್ಮಗ್ಲಿಂಗ್ ಕೇಸಿಗೆ ಸಂಬಂಧಪಟ್ಟಂತೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
ನಾಲ್ಕು ವರ್ಷದ ಹಿಂದೆಯೂ ಆದಾಯ ತೆರಿಗೆ ಇಲಾಖೆ ಪರಮೇಶ್ವರ್ ಒಡೆತನದ ಕಾಲೇಜಿನ ಮೇಲೆ ದಾಳಿ ನಡೆಸಿತ್ತು. ಈ ದಾಳಿ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ ಪಡೆಯಲಾಗಿತ್ತು. ಆಗ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು.
ಕೋಟಿಗಟ್ಟಲೆ ಮೊತ್ತದ ಚಿನ್ನ ದುಬೈಯಿಂದ ಕಳ್ಳದಾರಿಯಲ್ಲಿ ತಂದ ಪ್ರಕರಣಕ್ಕೆ ಸಂಬಂಧಿಸಿ ಸೆರೆಯಾಗಿ ಕೆಲವು ತಿಂಗಳಿಂದ ಜೈಲಿನಲ್ಲಿದ್ದ ರನ್ಯಾ ರಾವ್ಗೆ ನಿನ್ನೆಯಷ್ಟೇ ನ್ಯಾಯಾಲಯ ಜಾಮೀನು ನೀಡಿತ್ತು. ಇದರ ಬೆನ್ನಿಗೆ ಇಂದು ಗೃಹ ಸಚಿವರ ಮೆಡಿಕಲ್ ಕಾಲೇಜಿಗೇ ಇ.ಡಿ. ದಾಳಿಯಾಗಿರುವುದು ಭಾರಿ ಕುತೂಹಲ ಕೆರಳಿಸಿದೆ.
ಗೋಲ್ಡ್ ಸ್ಮಗ್ಲಿಂಗ್ ಕೇಸಿನಲ್ಲಿ ಕೆಲವು ಸಚಿವರ ಕೈವಾಡ ಇದೆ ಎಂದು ಆರಂಭದಿಂದಲೂ ಗುಸುಗುಸು ಕೇಳಿಬರುತ್ತಿತ್ತು. ಆದರೆ ರಾಜ್ಯ ಸರಕಾರ ಈ ಪ್ರಕರಣದ ತನಿಖೆಗೆ ಹೆಚ್ಚಿನ ಕಾಳಜಿ ತೋರಿಸಿಲ್ಲ ಎಂದು ಆರೋಪವಿದೆ.