ಮಂಗಳೂರು: ಶಾಲಾ-ಕಾಲೇಜುಗಳಿಗೆ ಡ್ರಗ್ಸ್ ರವಾನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸರದ್ದಾಗಿದೆ. ಆದ್ದರಿಂದ ಡ್ರಗ್ಸ್ ದಂಧೆ ನಡೆದಲ್ಲಿ ಆಯಾ ಠಾಣಾ ವ್ಯಾಪ್ತಿಯ ಇನ್‌ಸ್ಪೆಕ್ಟರ್, ಡಿವೈಎಸ್ಪಿ, ಕಮಿಷನರ್, ಎಸ್ಪಿಗಳೇ ಕಾರಣ. ತಮ್ಮನ್ನೇ ಹೊಣೆ ಮಾಡಲಾಗುತ್ತದೆ ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಖಡಕ್ ವಾರ್ನಿಂಗ್ ನೀಡಿದರು. ಮಂಗಳೂರು ನಗರದ ಪೊಲೀಸ್ ಲೇನ್‌ನಲ್ಲಿ ಪೊಲೀಸ್ ವಸತಿ ಸಮುಚ್ಚಯವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಮಿತಿಮೀರಿದ್ದ, ಕಳೆದ ವರ್ಷ 200ಕೋಟಿ ಮೌಲ್ಯದ ಡ್ರಗ್ಸ್ ಹಿಡಿಯಲಾಗಿದೆ. ಡ್ರಗ್ಸ್ ಪೆಡ್ಲರ್‌ಗಳಿಗೆ ಯಾವುದೇ ಕ್ಷಮೆಯಿಲ್ಲ. ಡ್ರಗ್ಸ್ ವಿರುದ್ಧ ಏನುಕ್ರಮ ಕೈಗೊಳ್ಳುತ್ತೀರೋ ನಾನು ಪೊಲೀಸರೊಂದಿಗೆ ಇರುತ್ತೇನೆ. ಪ್ರತೀ ತಿಂಗಳು ಶಾಲಾ-ಕಾಲೇಜುಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆ್ಯಂಟಿ ಡ್ರಗ್ ಕಾರ್ಯಾಚರಣೆ ನಡೆಸಬೇಕು ಎಂದರು. ಪೊಲೀಸ್ ಸಿಬ್ಬಂದಿಗೆ ಉತ್ತಮ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಪೊಲೀಸ್ ಗೃಹ ನಿರ್ಮಿಸಿ ಕೊಡಲಾಗಿದೆ. ಪ್ರಾರಂಭದಲ್ಲಿ ಒಂದು ಯುನಿಟ್ ವೆಚ್ಚ 16-17 ಲಕ್ಷ ಇದ್ದದ್ದು ಇಂದು 27 ಲಕ್ಷ ರೂ. ಆಗಿದೆ. ಸದ್ಯ ರಾಜ್ಯದಲ್ಲಿ ಲಕ್ಷಕ್ಕೂ ಮಿಕ್ಕಿ ಪೊಲೀಸರಿದ್ದಾರೆ. ಸದ್ಯ 45%ಪೊಲೀಸರಿಗೆ ವಸತಿ ನೀಡಲಾಗಿದೆ. ಕೇಂದ್ರದ ಗೃಹಸಚಿವರನ್ನು ಭೇಟಿ ಮಾಡಿ ಪೊಲೀಸ್ ಸಿಬ್ಬಂದಿಗೆ ಮನೆ ಕಟ್ಟಲು 1,500 ಕೋಟಿ ರೂ. ಕೇಳಿದ್ದೇನೆ. ಪ್ರತೀ ಪೊಲೀಸರಿಗೆ ಮನೆಗಳನ್ನು ಕೊಡುವ ಚಿಂತನೆಯಿದೆ. ಈ ಬಾರಿ 500ಕೋಟಿ ರೂ. 1,600 ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದೇವೆ. ಮುಂದಿನ ವರ್ಷವೂ 500-1000 ಕೋಟಿ ರೂ. ಕೊಡುತ್ತೇವೆ ಎಂದರು. ಠಾಣೆಗೆ ದೂರು ನೀಡಲು ಬಂದವವನ್ನೇ ಕಳ್ಳನಂತೆ ನೋಡುವ ಪೊಲೀಸ್ ವರ್ತನೆ ಸರಿಯಲ್ಲ. ಪೊಲೀಸರು ಜನಸ್ನೇಹಿ ಪೊಲೀಸ್ ಆಗಬೇಕಿದೆ. ಹಾಗೆಂದು ತಪ್ಪು ಮಾಡಿದವರನ್ನು ಬಿಡಿ ಎಂದು ಹೇಳುವುದಿಲ್ಲ. ಆದರೆ ಕಂಪ್ಲೆಂಟ್ ನೀಡಲು ಬಂದವರಿಗೆ ಠಾಣೆಯಲ್ಲಿ ಅರ್ಧಲೋಟ ಕಾಫಿ ಕೊಡುವುದಕ್ಕೆ ಆಗುವುದಿಲ್ಲವೇ?. ಈ ಹಿಂದೆ ಠಾಣೆಗೆ ಬಂದವರಿಗೆ ಉಪಚಾರಕ್ಕೆಂದು ಒಂದು ವರ್ಷಕ್ಕೆ 1ಲಕ್ಷ ಕೊಡುವ ಪರಿಪಾಠವಿತ್ತು. ಅದು ನಿಂತಿದ್ದಲ್ಲಿ, ಮತ್ತೆ ಕೊಡುವ ಹಾಗೆ ಮಾಡುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
