ಬೆಂಗಳೂರು: ವಯಸ್ಸಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಪ್ರಾಯ ಮಾಗಿದಂತೆ ಕಾಣುವುದನ್ನು ತಡೆಯಲು ಪ್ರಯತ್ನ ಮಾಡದವರಿಲ್ಲ. ಮುಖದ ಚರ್ಮ ಸುಕ್ಕಾಗದಂತೆ, ಕೂದಲು ಉದುರಿ ತಲೆಬೋಳಾಗದಂತೆ- ಹೀಗೆ ಏನೇನೆಲ್ಲ ಪ್ರಯತ್ನ ಮಾಡುವುದು ಸುಳ್ಳೇನಲ್ಲ. ಅವುಗಳಲ್ಲಿ ಒಂದು ಕೂದಲು ಬೆಳ್ಳಗಾಗುವುದನ್ನು ತಡೆಯುವುದು. ಕೂದಲಿಗೆ ಶಿಸ್ತಾಗಿ ಬಣ್ಣ ಹಚ್ಚಿಕೊಳ್ಳುವವರು ಕೆಲವರಾದರೆ, ನೆರೆಗೂದಲನ್ನು ಮುಂದೂಡಲು ಯತ್ನಿಸುವವರು ಹಲವರು. ಕೂದಲು ಬಿಳಿಯಾಗದಂತೆ ಮಾಡಲು ಕೆಲವು ಮನೆಮದ್ದುಗಳು ನೆರವಾಗುತ್ತವೆ. ಫಲಿತಾಂಶ ನೂರು ಪ್ರತಿಶತ ಆಗದಿರಬಹುದು, ಆದರೆ ಕೂದಲ ಆರೋಗ್ಯ ಸುಧಾರಿಸುವುದಂತೂ ನಿಶ್ಚಿತ.
ಮದರಂಗಿ: ತಲೆಗೂದಲಿಗೆ ಮದರಂಗಿ ಅಥವಾ ಮೆಹೆಂದಿ ಹಚ್ಚುವುದು ಅತ್ಯಂತ ಹಳೆಯ ಕ್ರಮ. ಆದರೆ ಇದರಿಂದ ಕೂದಲು ಕೆಂಬಣ್ಣಕ್ಕೆ ತಿರುಗುತ್ತದೆ ಎಂಬುದು ಹಲವರ ದೂರು. ಕೆಂಗೂದಲು ಇಷ್ಟವಿಲ್ಲದವರು ಇದನ್ನು ಒಪ್ಪುವುದಿಲ್ಲ. ಮದರಂಗಿಯ ಜೊತೆಗೆ ಮೆಂತೆ ಬೀಜಗಳು, ಕಾಫಿ ಡಿಕಾಕ್ಷನ್, ಬೆಸಿಲ್ ಮತ್ತು ಪುದೀನಾ ಸೊಪ್ಪನ್ನು ಸೇರಿಸಿ ಪೇಸ್ಟ್ ಮಾಡಿ. ಇದಕ್ಕೆ ಮೊಸರು ಸೇರಿಸಿ ಒಂದಿಡೀ ರಾತ್ರಿ ಹಾಗೆಯೇ ಬಿಡಿ. ಮಾರನೇ ದಿನ ಕೂದಲಿಗೆ ಸಾದ್ಯಂತವಾಗಿ ಲೇಪಿಸಿ, ಎರಡು ತಾಸುಗಳ ಕಾಲ ಹಾಗೆಯೇ ಬಿಡಿ. ನಂತರ ಲಘುವಾದ ಶಾಂಪೂ ಉಪಯೋಗಿಸಿ ಉಗುರು ಬಿಸಿ ನೀರಿನಿಂದ ತಲೆಸ್ನಾನ ಮಾಡಿ.
ನೆಲ್ಲಿಕಾಯಿ: ಈಗ ತಾಜಾ ನೆಲ್ಲಿಕಾಯಿ ದೊರೆಯುವ ಸಮಯ. ಒಂದು ಮುಷ್ಟಿ ನೆಲ್ಲಿಕಾಯನ್ನು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಮದರಂಗಿ ಪುಡಿ, ಕಾಫಿ ಡಿಕಾಕ್ಷನ್ ಮತ್ತು ಒಂದು ಮೊಟ್ಟೆಯನ್ನು ಸೇರಿಸಿ ಚೆನ್ನಾಗಿ ಗೊಟಾಯಿಸಿ. ಕೈಯಲ್ಲಿ ಉಪಯೋಗಿಸುವ ಮಿಕ್ಸರ್ ಇದ್ದರೆ ಕೆಲಸ ಸುಲಭ. ಈ ನಯವಾದ ಮಿಶ್ರಣವನ್ನು ತಲೆಯ ಬುಡ ಮತ್ತು ಕೂದಲು- ಎರಡಕ್ಕೂ ಆಮೂಲಾಗ್ರವಾಗಿ ಲೇಪಿಸಿ, ಮೂರು ತಾಸುಗಳ ಕಾಲ ಬಿಡಿ. ನಂತರ ತಲೆಸ್ನಾನ ಮಾಡಿ. ಇದನ್ನು ಪದೇಪದೆ ಪ್ರಯೋಗಿಸಬಹುದು.
ಕೊಬ್ಬರಿ ಎಣ್ಣೆ: ನೆಲ್ಲಿಕಾಯಿ ಬಳಸಿ ಕೊಬ್ಬರಿ ಎಣ್ಣೆಯಲ್ಲಿ ಕೂದಲಿನ ಆರೈಕೆಯ ಎಣ್ಣೆ ಮಾಡಿಕೊಳ್ಳುವುದು ಸಹ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನೆಲ್ಲಿಕಾಯಿಪೇಸ್ಟ್ ಬಳಸಿ ಮಾತ್ರವಲ್ಲ, ಒಣಗಿಸಿ ನೆಲ್ಲಿಕಾಯಿಯಲ್ಲೂ ಇದನ್ನು ಮಾಡಬಹುದು. ಕೊಬ್ಬರಿ ಎಣ್ಣೆಯಲ್ಲಿ ಆಮ್ಲ ಪೇಸ್ಟ್ ಮಿಶ್ರ ಮಾಡಿ ಎಣ್ಣೆಯಲ್ಲಿ ಸ್ವಲ್ಪ ಹೊತ್ತು ಕುದಿಸಿ. ಪೂರ್ಣ ತಣ್ಣಗಾಗುವವರೆಗೆ ಹಾಗೆಯೇ ಬಿಡಿ. ನಂತರ ಶೋಧಿಸಿ, ಎಣ್ಣೆಯನ್ನು ಶೇಖರಿಸಿಕೊಳ್ಳಿ. ಇದನ್ನು ತಲೆಗೂದಲಿನ ಬುಡಕ್ಕೆ ನಿಯಮಿತವಾಗಿ ಲೇಪಿಸುವುದರಿಂದ ಬಿಳಿಗೂದಲು ಬರುವುದನ್ನು ಮುಂದೂಡಬಹುದು.
ಚಹಾ ಡಿಕಾಕ್ಷನ್: ಹಲವು ವಸ್ತುಗಳ ಜೊತೆಗೆ ಮಿಶ್ರಣ ಮಾಡಿ ತಲೆಗೂದಲಿಗೆ ಕಾಫಿ ಡಿಕಾಕ್ಷನ್ ಬಳಸಿದ ರೀತಿಯಲ್ಲೇ ಚಹಾ ಡಿಕಾಕ್ಷನ್ ಸಹ ಬಳಕೆಯಲ್ಲಿದೆ. ಕಡುಕಪ್ಪು ಬಣ್ಣದ ಡಿಕಾಕ್ಷನ್ ಸಿದ್ಧಪಡಿಸಿಕೊಳ್ಳಿ. ಇದು ಬಿಸಿ ಇರುವಾಗಲೇ ನಾಲ್ಕಾರು ಚಮಚ ಬೀಟ್‌ರೂಟ್ ರಸ ಸೇರಿಸಿ. ಈ ಮಿಶ್ರಣ ಬೆಚ್ಚಗಿರುವಾಗಲೇ ತಲೆಗೆ ಪೂರ್ಣವಾಗಿ ಲೇಪಿಸಿ. ಅರ್ಥ ತಾಸಿನ ನಂತರ ತಣ್ಣೀರಿನಲ್ಲಿ ತಲೆಸ್ನಾನ ಮಾಡಿ.
ಈರುಳ್ಳಿ: ತಲೆಗೂದಲ ಆರೈಕೆಯಲ್ಲಿ ಈರುಳ್ಳಿಗೆ ಅಗ್ರಸ್ಥಾನವಿದೆ. ಅರ್ಧ ಕಪ್‌ನಷ್ಟು ಈರುಳ್ಳಿ ರಸ ತೆಗೆಯಿರಿ. ಇದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ. ಈ ಮಿಶ್ರಣವನ್ನು ಇಡೀ ತಲೆಗೆ ಲೇಪಿಸಿ. ಒಂದು ತಾಸಿನ ನಂತರ ಬೆಚ್ಚಗಿನ ನೀರಿನಲ್ಲಿ ಲಘುವಾದ ಶಾಂಪೂ ಬಳಸಿ ತಲೆಸ್ನಾನ ಮಾಡಿ.
ಕರಿಬೇವಿನ ಎಲೆಗಳು: ಈ ಎಲೆಗಳಲ್ಲಿರುವ ಕಬ್ಬಿಣ ಮತ್ತು ವಿಟಮಿನ್‌ಗಳು ತಲೆಗೂದಲ ಆರೈಕೆಗೆ ಹೇಳಿಸಿದಂತಿವೆ. ಈ ಎಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತೈಲವನ್ನು ಮಾಡಿಯೂ ಬಳಸಬಹುದು. ಅದಿಲ್ಲದಿದ್ದರೆ, ಈ ಎಲೆಗಳನ್ನು ಅರೆದು ಪೇಸ್ಟ್ ಮಾಡಿ, ಅದಕ್ಕೆ ಮೊಸರು ಸೇರಿಸಿ ಇಡೀ ತಲೆಗೆ ಲೇಪಿಸಬಹುದು. ತಲೆಯ ಚರ್ಮದ ಆರೋಗ್ಯ ರಕ್ಷಣೆಗೆ ಇದು ಪೂರಕ.