ಬೆಂಗಳೂರು : ನಾವು ಒಳ ಮೀಸಲಾತಿಯಡಿ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಕೊಟ್ಟಿದ್ದ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಮೀಸಲಾತಿ ನೀಡಿ, ಕಾಂಗ್ರೆಸ್ ಸರಕಾರ ನಿಗದಿ ಪಡಿಸಿದರೆ ಅದರ ವಿರುದ್ಧ ಬಿಜೆಪಿ ಹೋರಾಟ ಮಾಡಲಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಎಚ್ಚರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜಸ್ಟಿಸ್ ನಾಗಮೋಹನ್‍ದಾಸ್ ಅವರು ನೀಡಿದ ವರದಿಯನ್ನು ಗಮನಿಸಿ ನಾವು ನಿರ್ಧಾರ ಮಾಡುತ್ತೇವೆ ಎಂದರು. ಪಕ್ಷವು ನಿನ್ನೆ ಕೈಗೊಂಡ ತೀರ್ಮಾನದಂತೆ ಪಕ್ಷದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಮನವಿ ಮಾಡಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹನಿಟ್ರ್ಯಾಪ್ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. ಆದ್ದರಿಂದ ಈ ಹನಿಟ್ರ್ಯಾಪ್ ಹಿಂದೆ ಯಾರ್ಯಾರಿದ್ದಾರೆ? ಯಾರ್ಯಾರನ್ನು ಬಲಿ ತೆಗೆದುಕೊಳ್ಳುವ ವಿಚಾರ ಇದೆ ಎಂಬುದು ಬಹಿರಂಗ ಆಗಬೇಕಿದೆ. ರಾಜಣ್ಣ ಇರಬಹುದು, ಅವರ ಮಗ ರಾಜೇಂದ್ರರ ಕೊಲೆಯತ್ನದ ಹೇಳಿಕೆ ಏನಿದೆಯೋ- ಅದು ಗಂಭೀರ ವಿಚಾರ ಎಂದು ವಿಶ್ಲೇಷಿಸಿದರು.
ಸರಕಾರ ಕೂಡಲೇ ಅವರಿಗೆ ಭದ್ರತೆ ಒದಗಿಸಬೇಕು ಎಂದ ಅವರು, ಸರಕಾರದ ಒಳಗೆ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ಸಿನ ಒಳಗೇ ಈ ಸ್ಥಿತಿ ಬಂದರೆ, ಬೇರೆ ಪಕ್ಷದ ನಾಯಕರ ಪರಿಸ್ಥಿತಿ ಏನು ಎಂಬುದನ್ನು ಕೂಡ ನಾವು ಗಂಭೀರವಾಗಿ ಯೋಚಿಸಬೇಕಿದೆ ಎಂದು ತಿಳಿಸಿದರು. ಹನಿಟ್ರ್ಯಾಪ್ ವಿಚಾರವನ್ನು ಸಿಬಿಐ ಅಥವಾ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲು ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ದಿನ ಕಳೆಯುವುದರಲ್ಲಿ, ಸಮಯ ವ್ಯರ್ಥ ಮಾಡುವುದರಲ್ಲಿ ಏನೇನೂ ಅರ್ಥ ಇಲ್ಲ ಎಂದರು.