ನವದೆಹಲಿ : ಹನಿಟ್ರ್ಯಾಪ್ ಕುಖ್ಯಾತಿ ಕರ್ನಾಟಕದ ಗೌರವವನ್ನು ಕಡಿಮೆ ಮಾಡಿದೆ. ಕಾಂಗ್ರೆಸ್ನ ಅಧಿಕಾರದ ಲಾಲಸ್ಯ ನೈತಿಕತೆಯನ್ನು ಅಧೋಗತಿಗೆ ತೆಗೆದುಕೊಂಡಿದೆ ಎಂದು ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಜನಪ್ರತಿನಿಧಿಗಳ ಮೇಲೆ ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಕಿದ ಕಡೆಯಲ್ಲ ಹಗರಣ. ಒಂದು ಹಗರಣದಿಂದ ಮತ್ತೊಂದು ಹಗರಣ ಆಗುತ್ತಿದೆ. ಎರಡು ವರ್ಷದಲ್ಲಿ ಹತ್ತು ಹಗರಣ ಆಚೆ ಬಂದಿದೆ. ಕೈ ಹಾಕಿದ ಕಡೆಯಲ್ಲ ಹಗರಣ ಬರುತ್ತಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ನೈತಿಕ ಅಧಪತನ ನೋಡಿದ್ದೇವೆ. ಮನಿ ಕ್ರೈಸಿಸ್ ಇತ್ತು ಈಗ ಹನಿ ಕ್ರೈಸಿಸ್ ಶುರುವಾಗಿದೆ. ಸರ್ಕಾರ ಆರ್ಥಿಕವಾಗಿ, ನೈತಿಕವಾಗಿ ದಿವಾಳಿಯಾಗಿದೆ. ಕ್ಯಾಬಿನೆಟ್ ಸಚಿವರು ಹನಿಟ್ರ್ಯಾಪ್ ಆಗುತ್ತಿದೆ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಹದಿನೈದು ದಿನದಿಂದ ವಿಧಾನಸೌಧದ ಮೊಗಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಇಂತಹ ಕ್ಯಾಬಿನೆಟ್ಗೆ ಏನು ಹೇಳಬೇಕು. ಇದು ನೈತಿಕತೆ ಕಳೆದುಕೊಂಡ ಕ್ರಿಮಿನಲ್ ಕ್ಯಾಬಿನೆಟ್. ಸಿಎಂ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
48 ಜನರ ಸಿಡಿ ಎಂದು ರಾಜಣ್ಣ ಹೇಳಿದ್ದಾರೆ, ಅವರಿಗೆ ಮಾಹಿತಿ ಇದ್ದರೆ ಅವರು ಎಲ್ಲ ಮಾಹಿತಿಯನ್ನು ಕೊಡಬೇಕು. ಪೂರ್ಣ ಪ್ರಮಾಣದ ತನಿಖೆಯಾಗಬೇಕು. ಇದನ್ನು ಯಾರೇ ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಈಗ ಎಸ್ಐಟಿಗಳಿಗೆ ಮಹತ್ವವಿಲ್ಲ. ಹೀಗಾಗಿ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದರು.