ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಶೀಘ್ರವೇ ಖರೀದಿ ಕೇಂದ್ರಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಎಫ್ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಪ್ರತಿ ಕ್ವಿಂಟಲ್ ಗೆ 7280 ರೂ. ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಾಗಲಕೋಟೆ, ವಿಜಯಪುರ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ವಿಜಯನಗರ, ರಾಯಚೂರು ಜಿಲ್ಲೆಗಳ ವ್ಯಾಪ್ತಿಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು. ಪ್ರತಿ ಎಕರೆಗೆ 4 ಕ್ವಿಂಟಲ್ ನಂತೆ ಗರಿಷ್ಠ 20 ಕ್ವಿಂಟಲ್ ಸೂರ್ಯಕಾಂತಿ ಖರೀದಿಸಲಾಗುವುದು. ಖರೀದಿ ಪ್ರಕ್ರಿಯೆ ಆದೇಶ ಹೊರಡಿಸಿದ ನಂತರ 90 ದಿನಗಳವರೆಗೆ ನಡೆಯಲಿದೆ. ರೈತರು ಸಮೀಪದ ಪ್ಯಾಕ್ಸ್, ಎಫ್.ಪಿ.ಒ. ಮತ್ತು TAPCMSಗಳಲ್ಲಿ ಸೂರ್ಯಕಾಂತಿ ಮಾರಾಟ ಮಾಡಬಹುದಾಗಿದೆ ಎಂದು ಹೇಳಲಾಗಿದೆ.