ಚಿತ್ರದುರ್ಗ : ಏಳು ದಿನಗಳ ಕಾಲ ನಡೆಯುವ ಕೂಸಿನ ಮನೆ ತರಬೇತಿಗೆ ಆರೈಕೆದಾರರು ಗೈರು ಹಾಜರಾಗದೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ತಿಳಿಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೂಸಿನ ಮನೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಇದ್ದಾಗಿದ್ದು, ಮೊದಲನೆ ಹಂತದ ತರಬೇತಿ ಮುಗಿದಿದೆ. ಎರಡನೆ ಹಂತದ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಶ್ರದ್ದೆಯಿಂದ ಗ್ರಹಿಸಬೇಕು. ನರೇಗಾದಡಿ ಕೂಲಿ ಕೆಲಸದಲ್ಲಿ ತೊಡಗಿರುವವರ ಮಕ್ಕಳನ್ನು ಕೂಸಿನ ಮನೆಯಲ್ಲಿ ಜೋಪಾನವಾಗಿ ನೋಡಿಕೊಳ್ಳಬೇಕು. ಸೊನ್ನೆಯಿಂದ ಮೂರು ವರ್ಷದ ಕೂಸುಗಳ ಲಾಲನೆ ಪಾಲನೆಯಲ್ಲಿ ಯಾವುದೇ ಲೋಪವಾಗಬಾರದು. ಪೌಷ್ಟಿಕಾಂಶ ಆಹಾರ ಹಾಗೂ ಸ್ವಚ್ಚತೆಯನ್ನು ಕಾಪಾಡಿಕೊಂಡು ಸಂರಕ್ಷಣೆ ಮಾಡುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದು ಆರೈಕೆದಾರರಿಗೆ ಕರೆ ನೀಡಿದರು.
ಆರೈಕೆದಾರರಿಗೆ ತರಬೇತಿ ನೀಡಲು ಸಿ.ಡಿ.ಪಿ.ಓ. ಇಲಾಖೆಯ ಟ್ರೈನರ್ ಹೆಚ್.ಎಸ್.ಮಂಜುಳ, ವಾಸವಿ, ಎ.ಎನ್.ಎಸ್.ಎಸ್.ಐ.ಆರ್.ಡಿ. ಭವ್ಯ, ತಾಲ್ಲೂಕು ಪಂಚಾಯಿತಿ ವಿಷಯ ನಿರ್ವಾಹಕ ನಿಜಪ್ಪ ತರಬೇತಿಯಲ್ಲಿ ಉಪಸ್ಥಿತರಿದ್ದರು.