ಬಹುತೇಕರು ತುಪ್ಪವನ್ನು ವಿವಿಧ ರೀತಿಯಲ್ಲಿ ಬಳಸುತ್ತಾರೆ. ಘಮಘಮಿಸುವ ತುಪ್ಪಕ್ಕೆ ವೆಜಿಟೆಬಲ್ ಆಯಿಲ್, ಪ್ರಾಣಿಗಳ ಕೊಬ್ಬು, ಖನಿಜಗಳ ಕೊಬ್ಬು, ಹಾಗೂ ಸ್ಟಾರ್ಚ್ ಸೇರಿದಂತೆ ಇನ್ನಿತ್ತರ ಕಲಬೆರಕೆ ವಸ್ತುಗಳನ್ನು ಸೇರಿಸಲಾಗುತ್ತದೆ.
ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಶುದ್ಧ ತುಪ್ಪ ಯಾವುದು ನಕಲಿ ತುಪ್ಪ ಯಾವುದೆಂದು ಪತ್ತೆ ಹಚ್ಚುವುದು ಕಷ್ಟಕರವಾಗಿದೆ. ಆದರೆ ಈ ಕಲಬೆರಕೆಯ ತುಪ್ಪದ ಸೇವನೆಯಿಂದ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳಾಗುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಂದ ತುಪ್ಪವು ಶುದ್ಧವಾಗಿದೆಯೇ ಎಂದು ಈ ಕೆಲವು ವಿಧಾನದ ಮೂಲಕ ಪತ್ತೆ ಹಚ್ಚಬಹುದು.
ಬಿಸಿ ಪಾತ್ರೆ ಮೂಲಕ ಪರೀಕ್ಷಿಸಿ ತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು, ಬಿಸಿ ಬಾಣಲೆಯಲ್ಲಿ ಒಂದು ಚಮಚ ತುಪ್ಪವನ್ನು ಹಾಕಿ. ತುಪ್ಪ ತಕ್ಷಣವೇ ಕರಗಿ ಕಂದು ಬಣ್ಣದಲ್ಲಿ ಕಾಣುತ್ತಿದ್ದರೆ, ಅದು ಅಸಲಿ ತುಪ್ಪ ಎಂದರ್ಥ. ಕರಗುವ ಸಮಯದಲ್ಲಿ ತುಪ್ಪ ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆ ತುಪ್ಪ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಟಲಿ ಪರೀಕ್ಷೆ ಒಂದು ಚಮಚ ತುಪ್ಪವನ್ನು ಕರಗಿಸಿ ಮತ್ತು ಅದನ್ನು ಪಾರದರ್ಶಕ ಬಾಟಲಿಗೆ ಹಾಕಿ.
ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ. ಸಕ್ಕರೆ ಬೆರೆಸಿದ ನಂತರ ಬಾಟಲಿಯನ್ನು ಮುಚ್ಚಿ. ಸ್ವಲ್ಪ ಸಮಯ ಈ ಮಿಶ್ರಣವನ್ನು ಹಾಗೆಯೇ ಬಿಡಿ. ಬಾಟಲಿಯ ತಳದಲ್ಲಿ ಕೆಂಪು ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭಿಸಿದರೆ, ತುಪ್ಪ ನಕಲಿ ಎಂದು ಅರ್ಥ. ಅಂಗೈ ಮೇಲೆ ಹಾಕಿ ಗುರುತಿಸಿ ಸ್ವಲ್ಪ ತುಪ್ಪವನ್ನು ನಿಮ್ಮ ಅಂಗೈ ಮೇಲೆ ಹಾಕಿಕೊಳ್ಳಿ. ಸ್ವಲ್ಪ ಸಮಯದ ನಂತರ ಅದು ಕರಗಲು ಪ್ರಾರಂಭಿಸಿದರೆ ಅದು ಶುದ್ಧ ತುಪ್ಪವಾಗಿರುತ್ತದೆ. ಇದು ಹೆಚ್ಚು ವ್ಯತ್ಯಾಸವನ್ನು ಉಂಟುಮಾಡದಿದ್ದರೆ, ತುಪ್ಪ ಕಲಬೆರಕೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮಾರುಕಟ್ಟೆಯಿಂದ ತಂದ ತುಪ್ಪದಲ್ಲಿ ಕಲಬೆರಕೆಯನ್ನು ಗುರುತಿಸಲು ಅದಕ್ಕೆ ನಾಲ್ಕೈದು ಹನಿ ಅಯೋಡಿನ್ ಸೇರಿಸಬೇಕು. ಒಂದು ವೇಳೆ ತುಪ್ಪವು ನೀಲಿ ಬಣ್ಣಕ್ಕೆ ತಿರುಗಿದರೆ ಕಲಬೆರಕೆಯಾಗಿದೆ ಎಂದರ್ಥ.