ಶ್ರೀನಗರ: ನೂರಕ್ಕೂ ಅಧಿಕ ಉಗ್ರರಿಗೆ ಒಳನುಸುಳಲು ಸಹಾಯ ಮಾಡಿದ್ದ, ಉಗ್ರರ ಲೋಕದಲ್ಲಿ ಮಾನವ ಜಿಪಿಎಸ್ ಎಂದೇ ಕುಖ್ಯಾತನಾಗಿದ್ದ ಬಾಗು ಖಾನ್ ಎಂಬಾತನನ್ನು ಭದ್ರತಾ ಪಡೆ ಶನಿವಾರ ಎನ್‌ಕೌಂಟರ್‌ನಲ್ಲಿ ಸಾಯಿಸಿದೆ. ಇವನ ಜೊತೆಗೆ ಇನ್ನೂ ಓರ್ವ ಉಗ್ರ ಸತ್ತಿದ್ದಾನೆ.
ಸಮಂದರ್ ಚಾಚಾ ಎಂಬ ಇನ್ನೊಂದು ಹೆಸರನ್ನು ಹೊಂದಿರುವ ಬಾಗು ಖಾನ್ 1995ರಿಂದೀಚೆಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ನೆಲೆ ಮಾಡಿಕೊಂಡಿದ್ದ. ನೌಶೇರಾದಲ್ಲಿ ಇಂದು ಬೆಳಗ್ಗೆ ಅವನನ್ನು ಭದ್ರತಾ ಪಡೆ ಕೊಂದು ಹಾಕಿದೆ.
ಕಾಶ್ಮೀರದ ಗೆರೆಜ್ ಸೆಕ್ಟರ್‌ನಲ್ಲಿ 100ಕ್ಕೂ ಅಧಿಕ ಉಗ್ರರಿಗೆ ಒಳ ನುಸುಳಲು ಬಾಗು ಖಾನ್ ನೆರವಾಗಿದ್ದ, ಕಾಶ್ಮೀರ ಕಣಿವೆಯ ದುರ್ಗಮ ಪ್ರದೇಶಗಳೆಲ್ಲ ಈತನಿಗೆ ಅಂಗೈ ಮೇಲಿನ ಗೆರೆಗಳಷ್ಟೆ ಪರಿಚಿತವಾಗಿದ್ದ ಕಾರಣ ಉಗ್ರರನ್ನು ಒಳ ನುಸುಳಿಸುವ ಹೊಣೆಯನ್ನು ಉಗ್ರ ಸಂಘಟನೆಗಳು ಈತನಿಗೆ ವಹಿಸುತ್ತಿದ್ದವು. ಈತ ಮಾಡಿದ ಒಳನುಸುಳುವಿಕೆಗಳಲ್ಲಿ ಬಹುತೇಕ ಯಶಸ್ವಿಯಾಗಿದ್ದವು. ಭದ್ರತಾ ಪಡೆಗೆ ಚಳ್ಳೆಹಣ್ಣು ತಿನ್ನಿಸುವುದರಲ್ಲಿ ಈತ ನಿಸ್ಸೀಮನಾಗಿದ್ದ.
ಹಿಜ್ಬುಲ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಈತ ಬಳಿಕ ಎಲ್ಲ ಪಾಕಿಸ್ಥಾನಿ ಉಗ್ರ ಸಂಗಟನೆಗಳಿಗೆ ಒಳ ನುಸುಳುವಿಕೆಯಲ್ಲಿ ಸಹಾಯ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.