ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದೇನೆ. ಅವುಗಳನ್ನು ತೋರಿಸುತ್ತೇನೆ ಎಂದು ಮುಂದೆ ಬಂದಿರುವ ಅನಾಮಿಕನನ್ನು ಶುಕ್ರವಾರ ಶವ ಹೂಳಿರುವ ಸ್ಥಳಗಳನ್ನು ಪತ್ತೆ ಮಾಡುವುದಕ್ಕೆ ಕರೆದುಕೊಂಡು ಹೋಗಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳಿಗೆ ಒಂದು ದಿನದಲ್ಲಿ 13 ಶವಗಳನ್ನು ಹೂಳಿದ ಸ್ಥಳಗಳನ್ನು ಪತ್ತೆ ಮಾಡಿ ತೋರಿಸಿದ್ದಾನೆ.
ತಾನು ಕೆಲಸ ಮಾಡುತ್ತಿದ್ದ ದಿನಗಳಲ್ಲಿ ನೂರಾರು ಶವಗಳನ್ನು ಖುದ್ದು ಹೂತು ಹಾಕಿದ್ದೇನೆ ಎಂದು ನ್ಯಾಯಾಲಯದ ಎದುರು ಈಗಾಗಲೇ ಹೇಳಿಕೆ ದಾಖಲು ಮಾಡಿರುವ ದೂರುದಾರ ಮಹಜರು ಪ್ರಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಶವ ಹೂತು ಹಾಕಿದ್ದೆನ್ನಲಾದ ಶಂಕಿತ ಪ್ರದೇಶಗಳಲ್ಲಿ ದೂರುದಾರನ ಸಮ್ಮುಖ ಮಹಜರು ನಡೆಸಿದ ಎಸ್‌ಐಟಿ ಅಧಿಕಾರಿಗಳು, ಸಿಬ್ಬಂದಿ ಆ ಸ್ಥಳದ ಪೂರ್ಣ ಚಿತ್ರಣ ದಾಖಲು ಮಾಡಿಕೊಂಡರು.
ಎಸ್ಐಟಿ (ವಿಶೇಷ ತನಿಖಾ ತಂಡ) ಶುಕ್ರವಾರ 15 ಶಂಕಿತ ಸ್ಥಳಗಳನ್ನು ಗುರುತಿಸುವ ಯೋಜನೆ ಮಾಡಿಕೊಂಡಿದ್ದರೂ, ಒಂದು ದಿನದಲ್ಲಿ 13 ಸ್ಥಳಗಳನ್ನಷ್ಟೇ ಗುರುತಿಸಲು ಸಾಧ್ಯವಾಗಿದೆ.
ಈವರೆಗೆ 13 ಶವ ಹೂತಿರುವ ಸಾಧ್ಯತೆ ಇರುವ ಜಾಗಗಳನ್ನು ತೋರಿಸಿದ್ದಾನೆ. ಈ ಜಾಗಗಳನ್ನು ಗುರುತಿಸಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಮಧ್ಯಾಹ್ನದ ವೇಳೆಗೆ 8 ಸ್ಥಳಗಳನ್ನು ಪರಿಶೀಲಿಸಲಾಯಿತು. ನಂತರ ಅನಾಮಿಕ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಊಟ ಮುಗಿಸಿದ ಬಳಿಕ ಇನ್ನೂ 5 ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದಾನೆ. ಈವರೆಗೆ ಗುರುತಿಸಲಾದ ಸ್ಥಳಗಳಲ್ಲಿ ಜಮೀನಿನ ಮೇಲ್ಮೈ ಬದಲಾವಣೆ, ಮಣ್ಣಿನ ಬಣ್ಣ ವ್ಯತ್ಯಾಸ, ಹಾಗೂ ಜೀವಜಾಲದ ಚಟುವಟಿಕೆಗಳ ಸ್ಥಿತಿ ಮೊದಲಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಳ ಪರಿಶೀಲನೆ ನಡೆದಿದೆ.
ಶನಿವಾರವೂ ಶವ ಹೂತಿರುವ ಸ್ಥಳಗಳ ಗುರುತು ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅನಾಮಿಕ ವ್ಯಕ್ತಿ ನೀಡಿರುವ ಮಾಹಿತಿ ಆಧರಿಸಿ, ಶನಿವಾರ ಬೆಳಗ್ಗೆ ಮತ್ತೆ ಸ್ಥಳ ಗುರುತಿಸುವ ಕಾರ್ಯ ಮುಂದುವರಿಯಲಿದೆ. ಈ ಪ್ರಕ್ರಿಯೆ ಬಳಿಕ ಎಸ್ಐಟಿ ಉತ್ಖನನ ಕಾರ್ಯಾಚರಣೆಗೆ ಚಾಲನೆ ನೀಡಲಿದೆ. 15 ಸ್ಥಳಗಳನ್ನು ಗುರುತಿಸಿದ ಬಳಿಕ ಅಸ್ಥಿ ಪಂಜರ ಅಥವಾ ಶವದ ಅಂಶಗಳ ಪತ್ತೆಗಾಗಿ ಮಣ್ಣನ್ನು ಎತ್ತುವ ಉತ್ಖನನ ಪ್ರಕ್ರಿಯೆ ಕೈಗೊಳ್ಳಲಾಗುವುದು.
ನೇತ್ರಾವತಿ ನದಿ ತೀರದ ಕಾಡಿನಲ್ಲಿ ಮಧ್ಯಾಹ್ನದ ವೇಳೆಗೆ 8 ಸ್ಥಳಗಳನ್ನು ಅನಾಮಿಕ ವ್ಯಕ್ತಿ ತೋರಿಸಿದ್ದನು. ಆದರೆ, ಶವ ಹೂತ ಸ್ಥಳ ಗುರುತು ವೇಳೆ ಒಂದೊಂದು ಸ್ಥಳ ಪತ್ತೆಗೂ ಸುಮಾರು 20 ರಿಂದ 40 ನಿಮಿಷ ಸಮಯ ತೆಗೆದುಕೊಂಡಿದ್ದಾನಂತೆ. ನಂತರ, ಉಳಿದ ತಂಡವು ಆ ಸ್ಥಳವನ್ನು ಗುರುತಿಸಿ, ಸುರಕ್ಷಿತವಾಗಿ ಅಗಿಯಲು ಅನುಕೂಲ ಆಗುವಂತೆ ಮಾರ್ಕಿಂಗ್ ಮಾಡಿದ್ದಾರೆ. ಮಧ್ಯಾಹ್ನದ ನಂತರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ಊಟ ಮಾಡಿದ್ದಾನೆ. ಊಟದ ಬಳಿಕವೂ ಬೇರೆ ಕಡೆಗಳಲ್ಲಿ ಸ್ಥಳ ಮಹಜರು ಕಾರ್ಯ ಪುನಾರಂಭಿಸಿದ್ದಾರೆ. ಒಂದು ದಿನದಲ್ಲಿ 15 ಶವಗಳನ್ನು ಹೂಳಿರುವ ಜಾಗ ಪತ್ತೆ ಮಾಡಲು ಇನ್ನೂ ಪ್ರಕ್ರಿಯೆ ಚುರುಕುಗೊಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸಂಜೆ ತನಕ ಒಂದು ದಿನದಲ್ಲಿ 13 ಸ್ಥಳಗಳನ್ನು ಮಾತ್ರ ಗುರುತು ಮಾಡುವುದಕ್ಕೆ ಸಾಧ್ಯವಾಯಿತು.