ಚಿಕ್ಕಮಗಳೂರು :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ, ಅಪರೂಪದ ಶೋಲಾ ಕಾಡು ಸುಟ್ಟು ಕರಕಲಾಗಿದೆ.
ಚಾರ್ಮಾಡಿ ಘಾಟಿಯ ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ಅರಣ್ಯಕ್ಕೆ ಭಾರೀ ಪ್ರಮಾಣದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ.ಕಳೆದ ವಾರವಷ್ಟೇ ಚಾರ್ಮಾಡಿ ಘಾಟಿಯ ಬಿದಿರುತಳ ತಪ್ಪಲಿನ ಕಾಡಿನಲ್ಲಿ ಕಾಡ್ಗಿಚ್ಚಿಗೆ ಅರಣ್ಯ ಹಾಗೂ ಪ್ರಾಣಿ ಸಂಕುಲ ನಾಶವಾಗಿತ್ತು. ಕಳೆದ ರಾತ್ರಿ ಮತ್ತೆ ಚಾರ್ಮಾಡಿ ತಪ್ಪಲಿನ ಅರಣ್ಯಕ್ಕೆ ಬೆಂಕಿ ಬಿದ್ದು ಮತ್ತೆ ನೂರಾರು ಎಕರೆ ಅರಣ್ಯ ಭಸ್ಮವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ರಸ್ತೆಬದಿ ಇದ್ದ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯರು ಗುಡ್ಡ ಏರಿ ಬೆಂಕಿ ನಂದಿಸಲು ಸಾಧ್ಯವಾಗದೆ ಪರದಾಡಿದರು. ಬೆಂಕಿಯ ಕೆನ್ನಾಲಿಗೆ 10 ಕಿಲೋ ಮೀಟರ್‌ನಷ್ಟು ದೂರಕ್ಕೆ ಬೆಂಕಿ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.