ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಮೂವರ ವಿರುದ್ಧ ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಸೇರಿ ಮೂವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಿಜೆಪಿ ಮುಖಂಡ ಬಿಎಲ್ ಸಂತೋಷ್ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪವಿದ್ದು, ಈ ಬಗ್ಗೆ ಉಡುಪಿಯ ಬಿಜೆಪಿ ಮುಖಂಡರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು.
ಅದರಂತೆ, ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು. ತಿಮರೋಡಿಗೆ 2 ಬಾರಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಕೊನೆಯದಾದಗಿ ಬುಧವಾರ ನೋಟಿಸ್ ನೀಡಲಾಗಿತ್ತು.
ನಿನ್ನೆ ಅಂದರೆ ಗುರುವಾರ ಬೆಳಗ್ಗೆ 9 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆ ನೋಟಿಸ್ಗೆ, ‘15 ದಿನಗೊಳಗೆ ಹಾಜರಾಗುತ್ತೇನೆ’ ಎಂದು ತಿಮರೋಡಿ ಉತ್ತರಿಸಿದ್ದರು. ಪೊಲೀಸರು ಕೊಟ್ಟ ನೋಟಿಸ್ನಲ್ಲೇ ಉತ್ತರಿಸಿ ಸಹಿ ಮಾಡಿದ್ದರು. ಈ ಬೆಳವಣಿಗೆ ನಂತರ ಪೊಲೀಸರು ಅವರ ನಿವಾಸಕ್ಕೆ ದೌಡಾಯಿಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ತಿಮರೋಡಿ ವಶಕ್ಕೆ ಪಡೆಯುವ ವೇಳೆ ಅವರ ಆಪ್ತಬಳಗದ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಹಲವರು ಅದಕ್ಕೆ ಅಡ್ಡಪಡಿಸಿದ್ದರು. ಇದರ ವಿರುದ್ಧವೂ ಬ್ರಹ್ಮಾವರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದೂರು ನೀಡಿದ್ದರು. ಇದೀಗ ಇದೇ ವಿಚಾರವಾಗಿ ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬೆಳವಣಿಗೆ ಬೆನ್ನಲ್ಲೇ ತಮ್ಮ ವಿರುದ್ಧ ಕೇಸ್ ದಾಖಲಾದ ವಿಚಾರ ಗೊತ್ತಾಗ್ತಿದ್ದಂತೆ ಗಿರೀಶ್ ಮಟ್ಟಣ್ಣನವರ್ ಪೊಲೀಸ್ ಠಾಣೆಗೆ ಬಂದಿದ್ದು, ಬಂಧನ ಬೇಡ, ನಾನೇ ಸರೆಂಡರ್ ಆಗುವೆ ಎಂದು ಹೇಳಿದ್ದಾರೆ. ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನನ್ವಯ ಪೊಲೀಸ್ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಮೇಲೆ ಎಫ್ ಐ ಆರ್ ದಾಖಲಾಗಿದೆ. ಎಫ್ ಐ ಆರ್ ದಾಖಲಾಗಿದ್ದಂತೆ ಗಿರೀಶ್ ಮಟ್ಟಣ್ಣನವರ್ ಬೆಳ್ತಂಗಡಿ ಠಾಣೆಗೆ ಬಂದಿದ್ದಾರೆ. ಪೊಲೀಸರು ಬಂಧನ ಮಾಡೋದು ಬೇಡ, ನಾನೇ ಸರೆಂಡರ್ ಆಗೋಕೆ ಬಂದಿದ್ದೇನೆ ಎಂದು ಹೈಡ್ರಾಮಾ ಸೃಷ್ಟಿಸಿದ್ದಾರೆ.
‘ಸ್ಟೇಷನ್ ಅಂದ್ರೆ ನನಗೆ ಬೀಗರ ಮನೆ’
ಈ ಇದೇ ಮಾತಾಡಿದ ಗಿರೀಶ್ ಮಟ್ಟಣನವರ್ ಕೋರ್ಟ್ ಹಾಗೂ ಪೊಲೀಸ್ ಸ್ಟೇಷನ್ ಅಂದ್ರೆ ನನಗೆ ಬೀಗರ ಮನೆ ಆಗಿದೆ. ಮಾನವ ಹಕ್ಕುಗಳ ಆಯೋಗದ ಜೊತೆಗೆ ಬಂದಿದ್ದೇವೆ. ನಿನ್ನೆ ನೂರು ಜನ ಪೊಲೀಸರು ಬಂಧನಕ್ಕೆ ಬಂದಿದ್ರು. ಈ ವೇಳೆ ನಾವು ಯಾರೂ ಕೆಲಸಕ್ಕೆ ಅಡ್ಡಿಪಡಿಸಿಲ್ಲ. ಮಹೇಶ್ ತಿಮರೋಡಿ, ಜಯಂತ್ ಮತ್ತು ನನ್ನ ವಿರುದ್ಧ ಸೇರಿ 30 ಜನರ ಮೇಲೆ ಕೇಸ್ ಹಾಕಿದ್ದಾರೆ. ಸುಮ್ಮನೆ ಅವರ ಪೆಟ್ರೋಲ್ ವೇಸ್ಟ್ ಆಗೋದು ಬೇಡ. ಹೀಗಾಗಿ ಬಂಧನ ಮಾಡೋದಾದ್ರೆ ಮಾಡಲಿ ಅಂತ ಬಂದಿದ್ದೇನೆ. ಎಸ್ ಐ ಟಿಗೆ ಭೀಮಾ ಸುಳ್ಳು ಹೇಳಿದ್ದಕ್ಕೆ ಬಂಧನ ಅಂತ ಸುಳ್ಳು ಹೇಳ್ತಾ ಇದ್ದಾರೆ.
ನಮ್ಮನ್ನ ಭಯ ಪಡಿಸೋ ಕೆಲಸ ಆಗ್ತಾ ಇದೆ. ನಾವು ಯಾವುದೇ ಕಾರಣಕ್ಕೂ ಭಯ ಪಡೋದಿಲ್ಲ. ನಮ್ಮ ಮೇಲೆ ಕೇಸ್ ಮೇಲೆ ಕೇಸ್ ಹಾಕ್ತಾ ಇದ್ದಾರೆ. ಇದುವರೆಗೂ ನನ್ನ ಮೇಲೆ ನಾಲ್ಕೈದು ಕೇಸ್ ಹಾಕಿದ್ದಾರೆ. ಮಹೇಶ್ ಶೆಟ್ಟಿ ಮೇಲೆ 10ಕ್ಕೂ ಹೆಚ್ಚು ಕೇಸ್ ಹಾಕಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಕೇಸ್ ಹಾಕ್ತಾನೆ ಇದ್ದಾರೆ. ಎಲ್ಲವನ್ನು ಎದುರಿಸೋಕೆ ನಾನು ಸಿದ್ದವಿದ್ದೇವೆ ಎಂದು ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದಾರೆ.