ಬೆಂಗಳೂರು: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದಾರೆ. ಇಲ್ಲಸಲ್ಲದ ಮಾತು ಹೇಳಿ ವಿಜಯೇಂದ್ರ ಮರ್ಯಾದೆ ಕಳೆದುಕೊಳ್ಳೋದು ಬೇಡ. ಮಣಿಕಂಠ ರಾಥೋಡ್ ವಿಚಾರದಲ್ಲಿ ಇದೇ ಬಿಜೆಪಿ ಅವರು ಕಲಬುರ್ಗಿಗೆ ಬಂದು ನನ್ನ ರಾಜೀನಾಮೆ ಕೇಳಿದ್ರು. ಆಮೇಲೆ ಏನ್ ಆಯ್ತು. ಆ ಬಗ್ಗೆ ವಿಜಯೇಂದ್ರ ಮಾತಾಡಿದ್ರಾ? ಕಲಬುರ್ಗಿ ರಿಪಬ್ಲಿಕ್ ಅಂತೀರಾ ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಡಿ ಮೊದಲು ಎಂದು ಗುಡುಗಿದ್ದಾರೆ.
ಐಪಿಎಲ್ ದಂಧೆ ಮಾಡ್ತಿರೋ ಶಾಸಕರು ಯಾರು? ಅಕ್ಕಿ ಕಳ್ಳತನ, ಹಾಲು ಕಳ್ಳತನ ಮಾಡಿ ಕೇಸ್ ಹಾಕಿಸಿಕೊಂಡವರು ಯಾರು? ಮರಳು ಮಾಫಿಯಾ ಮಾಡಿರೋರು ಯಾರು? ಇತಿಹಾಸ ತೆಗೆದು ನೋಡಿ ವಿಜಯೇಂದ್ರ ಮಾತಾಡಲಿ. ರಾಜು ಕಪನೂರು ಬಿಜೆಪಿ ಎಸ್ಸಿ ಸೆಲ್ ಅಧ್ಯಕ್ಷ ಆಗಿದ್ರು. ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿರೋದು. ನಾವೇನು ಓಡಿ ಹೋಗ್ತಿಲ್ಲ. ತನಿಖೆ ಆಗಲಿ. ಎಫ್‌ಎಸ್‌ಎಲ್ ವರದಿ ಬರಲಿ ಎಂದು ಹೇಳಿದರು.
ಮೊದಲು ನಾನು ಕೇಳಿದ ಪ್ರಶ್ನೆಗೆ ಬಿಜೆಪಿ ಅವರು ಉತ್ತರ ಕೊಡಲಿ. ಯಡಿಯೂರಪ್ಪ ವಿರುದ್ಧ ಫೋಕ್ಸೊ ಕೇಸ್ ಪ್ರೂವ್ ಆಗಿದೆ. ಅದರ ಬಗ್ಗೆ ಮಾತಾಡಿ. ಮುನಿರತ್ನ ಕೇಸ್, ಸಿ.ಟಿ.ರವಿ ಕೇಸ್ ಬಗ್ಗೆ ಏನ್ ಹೇಳ್ತಾರೆ. ನನ್ನ ರಾಜೀನಾಮೆ ಕೇಳೋ ನೈತಿಕತೆ ಇದೆಯಾ ಎಂದು ಆಕ್ರೋಶ ವ್ಯಕ್ತಪಡಿಸಿದರು.