ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾಗ ಮೂರ್ನಾಲ್ಕು ಮಂದಿ ಹೆಣಗಳನ್ನು ಹೂತು ಹಾಕಿದ್ದನ್ನು ನಾನು ನೋಡಿದ್ದೇನೆ ಎಂದು ಪುರಂದರ ಗೌಡ ಎಂಬವರು ವಿಶೇಷ ತನಿಖಾ ದಳದ (ಎಸ್ಐಟಿ) ಮುಂದೆ ಹೇಳಿಕೆ ನೀಡಿದ್ದಾರೆ. ಅನಾಮಿಕ ಸಾಕ್ಷಿ ದೂರುದಾರನಂತೆ ಹೋಲುವ ವ್ಯಕ್ತಿಯೂ ಹೆಣ ಹೂತಿದ್ದನ್ನು ನಾನು ನೋಡಿದ್ದೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
2003ರಿಂದ 2017ರವರೆಗೆ ಧರ್ಮಸ್ಥಳದಲ್ಲಿ ಅಂಗಡಿ ನಡೆಸುತ್ತಿದ್ದ ಪುರಂದರ ಗೌಡ, ಈ ಅವಧಿಯಲ್ಲಿ ಸಾಕಷ್ಟು ಹೆಣಗಳನ್ನು ಹೂತಿರುವುದನ್ನು ನೋಡಿದ್ದಾಗಿ ಹೇಳಿದ್ದಾರೆ. “ಅನಾಮಿಕ ಸಾಕ್ಷಿಯ ದೇಹ ರಚನೆಯನ್ನು ಹೋಲುವ ವ್ಯಕ್ತಿ ಹೆಣ ಹೂತಿದ್ದನ್ನು ನಾನು ನೋಡಿದ್ದೇನೆ. ಆತ 1998ರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಬಹುಶಃ ಆ ವ್ಯಕ್ತಿಯೇ ಆಗಿರಬಹುದು” ಎಂದು ಅವರು ಹೇಳಿದ್ದಾರೆ.
ಅಂಬಾಸಿಡರ್ ಕಾರಿನಲ್ಲಿ ಹೆಣ ಸಾಗಾಟ
ನೇತ್ರಾವತಿ ಸ್ನಾನಘಟ್ಟದ ಬಳಿಯಿದ್ದ ತಮ್ಮ ಅಂಗಡಿಯಿಂದಲೇ ನಂ. 1 ಸ್ಪಾಟ್‌ನಲ್ಲಿ ಹೆಣ ಹೂತಿದ್ದನ್ನು ನೋಡಿದ್ದೇನೆ ಎಂದು ಪುರಂದರ ಗೌಡ ತಿಳಿಸಿದ್ದಾರೆ. “ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣವನ್ನು ತೆಗೆದು ಇಬ್ಬರು-ಮೂರು ಮಂದಿ ಕಾರ್ಮಿಕರು ಹೂತು ಹಾಕುತ್ತಿದ್ದರು. ಆದರೆ, ಅಲ್ಲಿ ಯಾವುದೇ ಪೊಲೀಸ್ ಅಥವಾ ವೈದ್ಯರು ಇರಲಿಲ್ಲ” ಎಂದು ಅವರು ಹೇಳಿದ್ದಾರೆ.
ಕೈಗಾಡಿಯಲ್ಲಿ ಹೆಣ ಸಾಗಿಸಿ ಹೂತಿದ್ದು ನೋಡಿದ್ದೇನೆ:
ತಮ್ಮ ಅಂಗಡಿಯ ಹಿಂಭಾಗದಲ್ಲಿದ್ದ 13ನೇ ಸ್ಪಾಟ್‌ನಲ್ಲೂ ಹೆಣಗಳನ್ನು ಹೂತಿದ್ದನ್ನು ಪುರಂದರ ಗೌಡ ನೋಡಿರುವುದಾಗಿ ಹೇಳಿದ್ದಾರೆ. “ಒಬ್ಬನೇ ವ್ಯಕ್ತಿ ಕೈಗಾಡಿಯಲ್ಲಿ ಮೃತದೇಹವನ್ನು ತಂದು ಗುಂಡಿ ತೋಡಿ ಹೂತಿದ್ದನ್ನು ನಾನು ನೋಡಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪ್ರಣವ್ ಮೊಹಂತಿ ಹೇಳಿದ್ದರು. ಆದರೆ, ಅಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದ್ದರಿಂದ ಅವರು ಹಿಂಬರಹ ನೀಡಿದ್ದರು. ಆ ಹಿಂಬರಹದ ಆಧಾರದ ಮೇಲೆ ಆಗಸ್ಟ್ 8ರಂದು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ ಪೊಲೀಸರು ತನ್ನನ್ನು ಸಂಪರ್ಕಿಸದ ಕಾರಣ ಇಂದು ಎಸ್ಐಟಿ ಕಚೇರಿಗೆ ಬಂದಿದ್ದೇನೆ ಎಂದು ಪುರಂದರ ಗೌಡ ಹೇಳಿದ್ದಾರೆ.