ಬೆಂಗಳೂರು : ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ನಾಯಕರ ವಿರುದ್ಧ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಶಾಸಕ ಶ್ರೀರಾಮುಲು ಮುನಿಸಿಕೊಂಡಿದ್ದಾರೆ. ಇದೇ ಬೇಸರದಲ್ಲಿ ನಾನು ಬಿಜೆಪಿ ಪಕ್ಷಕ್ಕೆ ಗುಡ್ ಬೈ ಹೇಳ್ತೀನಿ, ಪಕ್ಷ ತೊರೆಯುವಾಗ ಹೇಳಿಯೇ ಹೋಗುತ್ತೇನೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಮಂಗಳವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು ಈ ವೇಳೆ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಬಿ.ಶ್ರೀರಾಮುಲು ಮೇಲೆಯೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಗಂಭೀರ ಆರೋಪ ಮಾಡಿದ್ದಾರೆ. ಉಪಚುನಾವಣೆಯಲ್ಲಿ ಶ್ರೀರಾಮುಲು ಕೆಲಸ ಮಾಡಿಲ್ಲ ಎನ್ನುವ ಹಾಗೆ ಮಾತನಾಡಿದ್ದಾರೆ. ಇದರಿಂದ ಶ್ರೀರಾಮುಲು ಅಸಮಾಧಾನ ಹೊರ ಹಾಕಿದ್ದಾರೆ. ನಾನು ಕಷ್ಟಪಟ್ಟು ಶ್ರಮವಹಿಸಿ, ಉಪ-ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ವಿರುದ್ಧ ಸುಖಾಸುಮ್ಮನೆ ದೂರು ನೀಡಲಾಗಿದೆ, ಇದು ಸರಿಯಲ್ಲ. ಇಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಬೆಲೆಯೇ ಸಿಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಶಾಸಕ ಜನಾರ್ದನರೆಡ್ಡಿ ಮಾತು ಕೇಳಿ ನನ್ನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಸಭೆಯಲ್ಲಿ ನನ್ನನ್ನು ಅವಮಾನ ಮಾಡಲಾಗಿದೆ ಎಂದಿದ್ದಾರೆ.
