ವಾಷಿಂಗ್ಟನ್ : ನಾನು ಉಕ್ರೇನ್ ಯುದ್ಧವನ್ನು ಕೊನೆಗೊಳಿಸುತ್ತೇನೆ. ನಾನು ಮಧ್ಯಪ್ರಾಚ್ಯದಲ್ಲಿ ಅವ್ಯವಸ್ಥೆಯನ್ನು ನಿಲ್ಲಿಸುತ್ತೇನೆ ಮತ್ತು ಮೂರನೇ ಮಹಾಯುದ್ಧ ನಡೆಯದಂತೆ ತಡೆಯುತ್ತೇನೆ. ಗಡಿಗಳ ಮೇಲೆ ನಾವು ಶೀಘ್ರವಾಗಿ ನಿಯಂತ್ರಣವನ್ನು ಮರು ಸ್ಥಾಪಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿಗಾಗಿ ನಾವು ಮೊದಲ ಹೆಜ್ಜೆಯಾಗಿ ಐತಿಹಾಸಿಕ ಕದನ ವಿರಾಮ ಒಪ್ಪಂದವನ್ನು ಸಾಧಿಸಿದ್ದೇವೆ. ನವೆಂಬರ್ನಲ್ಲಿ ನಮ್ಮ ಐತಿಹಾಸಿಕ ವಿಜಯದ ಪರಿಣಾಮವಾಗಿ ಈ ಒಪ್ಪಂದವನ್ನು ಸಾಧಿಸಲು ಸಾಧ್ಯವಾಯಿತು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ನಾನು ಅಧ್ಯಕ್ಷನಾಗಿದ್ದರೆ ಇಸ್ರೇಲ್-ಹಮಾಸ್ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದಿದ್ದಾರೆ.
ಎಲಾನ್ ಮಸ್ಕ್ ಅವರ ಅಧ್ಯಕ್ಷತೆಯಲ್ಲಿ ನಾವು ಸರ್ಕಾರದ ದಕ್ಷತೆಯ ಹೊಸ ವಿಭಾಗವನ್ನು ರಚಿಸುತ್ತೇವೆ. ನಾವು ನಮ್ಮ ದೇಶವನ್ನು ಹಿಂದೆಂದಿಗಿಂತಲೂ ಶ್ರೇಷ್ಠವಾಗಿಸಲು ಹೊರಟಿದ್ದೇವೆ. ನಾವು ಅಮೆರಿಕಕ್ಕೆ ಹೊಸ ದಿನ ಆರಂಭಿಸುತ್ತಿದ್ದೇವೆ. ಶಕ್ತಿ ಮತ್ತು ಸಮೃದ್ಧಿ, ಘನತೆ ಮತ್ತು ವೈಭವ ಇವೆಲ್ಲಾ ಇರುತ್ತೆ ನಾವು ವಿಫಲವಾದ, ಭ್ರಷ್ಟ ರಾಜಕೀಯ ಸ್ಥಾಪನೆಯ ಆಡಳಿತವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.