ಹರಿಯಾಣ : ಯುಪಿಎಸ್ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸುತ್ತಾರೆ, ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಯಶಸ್ವಿಯಾಗುತ್ತಾರೆ. ಹೀಗೆ ನಾಲ್ಕು ಬಾರಿ ಯುಪಿಎಸ್ಸಿ ಪರಿಕ್ಷೆಯಲ್ಲಿ ವಿಫಲರಾದರೂ 5ನೇ ಬಾರಿಗೆ 9ನೇ ರ್ಯಾಂಕ್ ಪಡೆದ ಐಎಎಸ್ ಅಧಿಕಾರಿ ಆದಿತ್ಯ ವಿಕ್ರಮ್ ಅಗರ್ವಾಲ್ ಅವರ ಯಶೋಗಾಥೆ ಇದು.
ಆದಿತ್ಯ ವಿಕ್ರಮ್ ಅಗರ್ವಾಲ್ ಅವರು ಹರಿಯಾಣದ ಬಹದ್ದೂರ್ಗಢದ ನಿವಾಸಿ. ಅವರ ತಂದೆ ರಾಮ್ ಅವತಾರ್ ಅವರು ನಿವೃತ್ತ ಕಂಪನಿ ಉದ್ಯೋಗಿಯಾಗಿದ್ದು, ತಾಯಿ ಮಧು ಅಗರ್ವಾಲ್ ಅವರು ಗೃಹಿಣಿ.
ಆದಿತ್ಯ ಅವರ ಶೈಕ್ಷಣಿಕ ಪಯಣವು ಅವರ ಹುಟ್ಟೂರಾದ ಬಹದ್ದೂರ್ಗಢದಲ್ಲಿ ಶಾಲಾ ಶಿಕ್ಷಣದೊಂದಿಗೆ ಪ್ರಾರಂಭವಾಯಿತು. ನಂತರ ಅವರು ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ)ಯಿಂದ ಪದವಿ ಪಡೆದರು.
ಪದವಿ ಪೂರ್ಣಗೊಂಡ ನಂತರ, ಅವರು ಅಲ್ಪಾವಧಿಗೆ ಟಾಟಾ ಮೋಟಾರ್ಸ್ನಲ್ಲಿ ಕೆಲಸ ಮಾಡಿದರು. ಯುಪಿಎಸ್ಸಿ ಅಧಿಕಾರಿಯಾಗಿ ದೇಶಕ್ಕೆ ಸೇವೆ ಸಲ್ಲಿಸುವ ಗುರಿಯನ್ನು ಹೊಂದಿದ್ದ ಅವರು, ತಮ್ಮ ಉತ್ತಮ ವೇತನದ ಉದ್ಯೋಗವನ್ನು ತೊರೆದು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ತಯಾರಿ ನಡೆಸಿದರು.
ಆದಿತ್ಯ ಅವರು ಸತತ ನಾಲ್ಕು ಬಾರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರು. 2024ರಲ್ಲಿ ಐದನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಆದಿತ್ಯ ಅವರು 9ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
































