ನವದೆಹಲಿ : ಯುಪಿಎಸ್‌ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಪ್ರಯತ್ನಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಯಶಸ್ವಿಯಾಗುತ್ತಾರೆ. ಅಂತಹ ಯಶಸ್ಸಿನ ಕಥನದಲ್ಲಿ ದೃಷ್ಟಿಹೀನ ಆಯುಷಿ ದಬಾಸ್ ಅವರ ಪಯಣದ ಕಥನವು ಸ್ಪೂರ್ತಿದಾಯಕವಾಗಿದೆ.
ದೃಷ್ಟಿಹೀನರಾದರೂ ದೃಢಸಂಕಲ್ಪದಿಂದ ಜೀವನದ ಹಾದಿ ಬದಲಿಸಿದ ಐಎಎಸ್ ಅಧಿಕಾರಿ ಆಯುಷಿ ದಬಾಸ್, ಇತ್ತೀಚೆಗೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ನಿರೂಪಿಸುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆ ಮತ್ತು ಜ್ಞಾನದಿಂದ ಪ್ರೇಕ್ಷಕರ ಮನಸೆಳೆದಿದ್ದಾರೆ. ಸೆಪ್ಟೆಂಬರ್ 16, 2025 ರಂದು ಪ್ರಸಾರವಾದ ಕೆಬಿಸಿ 17ರ ಸಂಚಿಕೆಯಲ್ಲಿ ಆಯುಷಿ 25 ಲಕ್ಷ ರೂಪಾಯಿ ಗೆದ್ದರು. ತದನಂತರ ಮತ್ತಷ್ಟು ಸುದ್ದಿಯಾದರು.
ದೆಹಲಿಯ ರಾಣಿಖೇತ್ ಪ್ರದೇಶದ ಮೂಲದ ಆಯುಷಿ, ದೃಷ್ಟಿಹೀನಳಾಗಿ ಜನಿಸಿದರೂ ಅದನ್ನು ಜೀವನದ ಅಡ್ಡಿ ಎಂದು ಪರಿಗಣಿಸಲಿಲ್ಲ. ಬಾಲ್ಯದಲ್ಲೇ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡ ಅವರು, ಹಲವು ವರ್ಷಗಳ ಹೋರಾಟದ ನಂತರ ಆ ಗುರಿಯನ್ನು ಸಾಧಿಸಿದರು. ಪ್ರಸ್ತುತ ಅವರು ಭಾರತದ ಆಡಳಿತ ಸೇವೆಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶಾಲಾ ಶಿಕ್ಷಣದ ನಂತರ ದೆಹಲಿ ವಿಶ್ವವಿದ್ಯಾಲಯದ ಶ್ಯಾಮ ಪ್ರಸಾದ್ ಮುಖರ್ಜಿ ಕಾಲೇಜಿನಲ್ಲಿ ಪದವಿ ಪಡೆದ ಆಯುಷಿ, ಬಳಿಕ ಇಗ್ನೌ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದರು. ವೃತ್ತಿಜೀವನದ ಆರಂಭದಲ್ಲಿ ಅವರು ಶಿಕ್ಷಕಿಯಾಗಿ ಕೆಲಸ ಪ್ರಾರಂಭಿಸಿದರೂ, ದೃಷ್ಟಿಹೀನತೆಯಿಂದಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಈ ಸಂದರ್ಭದಲ್ಲೇ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
2019ರಲ್ಲಿ ಡಿಎಸ್‌ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಇತಿಹಾಸ ಶಿಕ್ಷಕಿಯಾದ ಆಯುಷಿ, ನಂತರ ಯುಪಿಎಸ್‌ಸಿ ಯತ್ತ ಗಮನ ಹರಿಸಿದರು. ಹಲವು ವಿಫಲ ಪ್ರಯತ್ನಗಳ ಬಳಿಕ ಐದನೇ ಪ್ರಯತ್ನದಲ್ಲಿ ಅವರು 2021ರ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ 48ನೇ ರ‍್ಯಾಂಕ್‌ನ್ನು ಪಡೆದರು. ತಮ್ಮ ಶ್ರದ್ಧೆ ಮತ್ತು ಶ್ರಮದಿಂದ ಅವರು ಸಾವಿರಾರು ಯುವಕರಿಗೆ ಮಾದರಿಯಾದರು.
ಆಯುಷಿಯ ತಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಾಯಿ ಹಿರಿಯ ನರ್ಸಿಂಗ್ ಅಧಿಕಾರಿಯಾಗಿದ್ದರು. ಪೋಷಕರ ಸಂಪೂರ್ಣ ಬೆಂಬಲ ಮತ್ತು ಪ್ರೋತ್ಸಾಹವೇ ತಮ್ಮ ಯಶಸ್ಸಿನ ಪ್ರಮುಖ ಕಾರಣ ಎಂದು ಆಯುಷಿ ತಿಳಿಸಿದ್ದಾರೆ.
ಕೆಬಿಸಿ ವೇದಿಕೆಯಲ್ಲಿ ಆಯುಷಿಯು ಒಂಬತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 90 ಸಾವಿರ ರೂಪಾಯಿಯಿಂದ ಆಟವನ್ನು ಮುಂದುವರಿಸಿದರು. ವಿವಿಧ ಲೈಫ್‌ಲೈನ್‌ಗಳ ಸಹಾಯದಿಂದ 13ನೇ ಪ್ರಶ್ನೆವರೆಗೆ ಸರಿಯಾಗಿ ಉತ್ತರಿಸಿದ ಅವರು 25 ಲಕ್ಷ ರೂ.ಗಳನ್ನು ಗೆದ್ದರು. 50 ಲಕ್ಷ ರೂ.ಗಳ ಪ್ರಶ್ನೆಗೆ ಉತ್ತರಿಸಲು ಲೈಫ್‌ಲೈನ್‌ಗಳು ಉಳಿದಿರದ ಕಾರಣ ಅವರು ಅಪಾಯ ತಪ್ಪಿಸಲು ಆಟದಿಂದ ಹಿಂದೆ ಸರಿದರು.
ಅಮಿತಾಬ್ ಬಚ್ಚನ್ ಅವರೊಂದಿಗೆ ಮಾತುಕತೆಯ ವೇಳೆ ಆಯುಷಿ ಭಾವುಕರಾಗಿ ಮಾತನಾಡಿ, “ನನಗೆ ದೊರೆತ ಮಾರ್ಗದರ್ಶನ ಮತ್ತು ಬೆಂಬಲ ನನ್ನ ಅದೃಷ್ಟ. ದೃಷ್ಟಿಹೀನತೆ ಅಥವಾ ಯಾವುದೇ ಅಡಚಣೆ ಜೀವನದಲ್ಲಿ ಅಸಾಧ್ಯತೆಯ ಅರ್ಥವಲ್ಲ ಎಂಬುದನ್ನು ನನ್ನ ಜೀವನದ ಮೂಲಕ ತೋರಿಸಲು ಬಯಸುತ್ತೇನೆ. ನನ್ನ ಕಥೆಯಿಂದ ಯಾರಿಗಾದರೂ ಸ್ಪೂರ್ತಿ ದೊರೆತರೆ, ಅದೇ ನನ್ನ ನಿಜವಾದ ಜಯ,” ಎಂದು ಹೇಳಿದರು.
ಆಯುಷಿ ದಬಾಸ್ ಅವರ ಈ ಸಾಧನೆ ದೇಶದಾದ್ಯಂತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಹೋರಾಟ, ದೃಢ ನಂಬಿಕೆ ಮತ್ತು ಸಾಧನೆ ಈಗ ಅನೇಕರಿಗೆ ಸ್ಫೂರ್ತಿಯಾಗಿದೆ.































