ದೆಹಲಿ : ಯುಪಿಎಸ್‌ಸಿ ಪರೀಕ್ಷೆ ಎಂದರೆ ಅತಿಕಠಿಣ ಸ್ಪರ್ಧೆಯ ಮಾರ್ಗ. ಈ ಹಾದಿಯಲ್ಲಿ ವರ್ಷಗಳ ಶ್ರಮ, ಸಮರ್ಪಣೆ, ಮತ್ತು ನಿರಂತರ ಬದ್ಧತೆ ಬೇಕಾಗುತ್ತದೆ. ಇಂತಹ ಪೈಪೋಟಿಯಲ್ಲಿ ತಮ್ಮ ಪೂರ್ಣಕಾಲಿಕ ಉದ್ಯೋಗದ ಜೊತೆ ಐಎಎಸ್ ಅಧಿಕಾರಿಯಾಗುವ ಗುರಿ ತಲುಪಿದ ಡಾ. ನೇಹಾ ಜೈನ್ ಅವರ ಸಾಧನೆಯು ಸಾವಿರಾರು ಅಭ್ಯರ್ಥಿಗಳಿಗೆ ಸ್ಪೂರ್ತಿ ನೀಡುವಂತದ್ದು.
ಮೂಲತಃ ದೆಹಲಿಯಿಂದ ಬಂದ ಡಾ. ನೇಹಾ, ತಮ್ಮ ಪ್ರಾಥಮಿಕ ಶಿಕ್ಷಣದ ನಂತರ ಮೌಲಾನಾ ಆಜಾದ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನಿಂದ ಬಿಡಿಎಸ್ ಪದವಿ ಪಡೆದರು. ಅವರ ಪೋಷಕರು ವಿಮಾ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ ಕಿರಿಯ ಸಹೋದರ ರಿಷಭ್ ಜೈನ್ ಮಕ್ಕಳ ವೈದ್ಯರಾಗಿದ್ದಾರೆ. ನೇಹಾ ಅವರು ಕೆಲ ಕಾಲ ಡೆಂಟಲ್ ಸಲಹೆಗಾರರಾಗಿ ಕೆಲಸ ಮಾಡಿದರು. ಆದರೆ, ತಮ್ಮ ವೃತ್ತಿಯಿಂದ ಅತೃಪ್ತಿ ಅನುಭವಿಸಿದ ಅವರು ಸಮಾಜಮುಖಿ ಸೇವೆಯಲ್ಲಿ ಹೆಚ್ಚು ಅರ್ಥವಿರುವ ಬದುಕು ಕಂಡರು. ಇದರ ಪ್ರೇರಣೆಯಿಂದಲೇ ಅವರು ಯುಪಿಎಸ್‌ಸಿಯತ್ತ ಮುಖಮಾಡಿದರು.
ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ದಂತ ವೈದ್ಯಕೀಯ ವೃತ್ತಿಯನ್ನು ಬಿಡದೆ, ಡಾ. ನೇಹಾ ತಮ್ಮ ಉದ್ಯೋಗದ ಜತೆಗೇ ಯುಪಿಎಸ್‌ಸಿಗೆ ತಯಾರಿ ನಡೆಸಿದರು. ದಿನಕ್ಕೆ ಕೇವಲ 4–5 ಗಂಟೆಗಳಷ್ಟೇ ಲಭ್ಯವಿದ್ದರೂ, ಅವರು ಸಮಯದ ಗಂಭೀರ ನಿರ್ವಹಣೆ ಮೂಲಕ ಅಧ್ಯಯನಕ್ಕೆ ಪ್ರಾಧಾನ್ಯ ನೀಡಿದರು. ವಾರಾಂತ್ಯಗಳಲ್ಲಿ ಹೆಚ್ಚು ಸಮಯ ಮೀಸಲಿಟ್ಟರು. ಯುಪಿಎಸ್‌ಸಿ ತರಬೇತಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಸಹಾಯದಿಂದ ಮತ್ತು ಸರಿಯಾದ ಯೋಜನೆಯ ಮೂಲಕ ತಮ್ಮ ಗುರಿ ಕಡೆಗೆ ಸಾಗಿದರು.
2017 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ, ಅವರು 14ನೇ ರ‍್ಯಾಂಕ್ ಗಳಿಸಿದರು. ಇದು ಅವರ ಮೊದಲ ಪ್ರಯತ್ನವಲ್ಲ. ಮೊದಲ ಪ್ರಯತ್ನದಲ್ಲಿ ವಿಫಲವಾದರೂ, ಅವರು ಹಿಮ್ಮೆಟ್ಟದೆ ಮುಂದುವರಿದರು. ಅವರ ಈ ಯಶಸ್ಸು ಉತ್ತರ ಪ್ರದೇಶ ಕೇಡರ್‌ಗೆ ಐಎಎಸ್ ಅಧಿಕಾರಿಯಾಗಿ ನೇಮಕವಾಗುವ ಮೂಲಕ ದೇಶದ ಅನೇಕ ಯುವಕರಿಗೆ ಸಂಕೇತವಾಗಿ ಪರಿಣಮಿಸಿದೆ.
ಡಾ. ನೇಹಾ ಜೈನ್ ಅವರ ಕಥೆ ಕೇವಲ ಯುಪಿಎಸ್‌ಸಿ ಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ತಮ್ಮ ಜೀವನದಲ್ಲಿ ಹೊಸ ದಿಕ್ಕು ಹುಡುಕುವ ಎಲ್ಲರಿಗೂ ಪ್ರೇರಣಾದಾಯಕ.