ತಿರುವನಂತಪುರ : ಹೆಚ್ಚಿನ ಆಕಾಂಕ್ಷಿಗಳು ತಮ್ಮ ವಯಸ್ಸು, ಕುಟುಂಬದ ಜವಾಬ್ದಾರಿಗಳು ಅಥವಾ ಕೆಲಸದ ಒತ್ತಡದಿಂದ ಯುಪಿಎಸ್‌ಸಿ ಪರೀಕ್ಷೆಗೆ ವಿದಾಯ ಹೇಳುವ ವಯಸ್ಸಿನಲ್ಲಿ, ಕೇರಳದ ತಿರುವನಂತಪುರದ ನಿಸಾ ಉನ್ನಿರಾಜನ್ 40ನೇ ವಯಸ್ಸಿನಲ್ಲಿ ಐಎಎಸ್ ಕನಸನ್ನು ನಿಜಗೊಳಿಸಿದ್ದಾರೆ. ಇಬ್ಬರು ಚಿಕ್ಕ ಮಕ್ಕಳ ತಾಯಿ, ಪೂರ್ಣಾವಧಿ ಉದ್ಯೋಗಿ ಮತ್ತು ಶ್ರವಣದೋಷವಿರುವ ನಿಸಾ, ತನ್ನ ಏಳನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 1000ನೇ ರ‍್ಯಾಂಕ್ ಪಡೆದಿದ್ದಾರೆ. ಶ್ರೇಣಿಯಲ್ಲಿ ಹಿಂದೆ ಇದ್ದರೂ, ಅಂಗವಿಕಲರ ವರ್ಗದಲ್ಲಿ ಆಯ್ಕೆಯಾಗಿ ಐಎಎಸ್ ಅಧಿಕಾರಿಯಾಗಿ ಅರ್ಹತೆ ಪಡೆದಿದ್ದಾರೆ.
ನಿಸಾ ಅವರ ಈ ಸಾಧನೆ ಕೇವಲ ವೈಯಕ್ತಿಕ ಗೆಲುವು ಮಾತ್ರವಲ್ಲ. ಅದು ದೈಹಿಕ ಅಡಚಣೆ, ವಯಸ್ಸು ಮತ್ತು ವೈವಾಹಿಕ ಜವಾಬ್ದಾರಿಗಳ ನಡುವೆಯೂ ಸಾಧನೆಯ ಎತ್ತರ ತಲುಪಬಹುದೆಂಬ ಬಲವಾದ ಸಂದೇಶ. ನಿಸಾ ಅವರ ಪತಿ ಅರುಣ್ ಸಾಫ್ಟ್‌ವೇರ್ ಎಂಜಿನಿಯರ್, ಅವರ ಪೋಷಕರು ನಿವೃತ್ತ ಪೊಲೀಸ್ ಸಿಬ್ಬಂದಿ ಉನ್ನಿರಾಜನ್ ಮತ್ತು ಜಯಶ್ರೀ. ಇವರು ಈ ಪ್ರಯಾಣದಲ್ಲಿ ನಿಸಾಗೆ ಶಕ್ತಿಯ ಚಿಲುಮೆಯಾಗಿದ್ದರು.
ಅವರ ತರಬೇತಿ ತಿರುವನಂತಪುರದ ಖಾಸಗಿ ಕೋಚಿಂಗ್ ಕೇಂದ್ರದಲ್ಲಿ ನಡೆದಿತ್ತು. ಶ್ರವಣದೋಷವಿರುವವರಿಗೂ ಈ ಹಾದಿ ಸಾಧ್ಯವೆಂಬ ದೃಷ್ಟಾಂತವಾಗಿದ್ದ ಕೊಟ್ಟಾಯಂನ ಸಬ್-ಕಲೆಕ್ಟರ್ ರಂಜಿತ್ ಅವರಿಂದ ನಿಸಾ ಅಪಾರ ಪ್ರೇರಣೆ ಪಡೆದಿದ್ದರು. ಈ ಪ್ರಯಾಣದಲ್ಲಿ ಅವರು ಜೀವನಚರಿತ್ರೆ, ಯಶಸ್ಸಿನ ಕಥೆಗಳು ಮತ್ತು ಪ್ರೇರಣಾದಾಯಕ ವೀಡಿಯೊಗಳಿಂದ ನಿರಂತರ ಧೈರ್ಯವನ್ನು ಪಡೆದುಕೊಂಡರು. ಅವರ ದಿನಚರಿ ತೀವ್ರವಾದರೂ, ಅದರಲ್ಲಿ ಶಿಸ್ತೂ, ಉದ್ದೇಶವೂ ತುಂಬಿತ್ತು.
ನಿಸಾ ಎದುರಿಸಿದ ಅತಿದೊಡ್ಡ ಅಡ್ಡಿ ಅವರ ಶ್ರವಣದೋಷ. ಆದರೆ ಅದನ್ನು ಅವರು ತಮ್ಮ ದೌರ್ಬಲ್ಯವನ್ನಾಗಿ ಪರಿಗಣಿಸದೆ, ಪ್ರೇರಣೆಯಾಗಿ ಮಾಡಿಕೊಂಡರು. ತಾವು ಮಾಡಿದ ತಪ್ಪುಗಳನ್ನು ಗುರುತಿಸಿ, ಪ್ರತಿ ಬಾರಿಯೂ ಅದರಿಂದ ಕಲಿಯುತ್ತಾ ಮುಂದೆ ಸಾಗಿದರು. ಕಳೆದ ಆರು ಪ್ರಯತ್ನಗಳಲ್ಲಿ ವಿಫಲರಾದರೂ ನಿರಾಶರಾಗದೆ, ಏಳನೇ ಬಾರಿ ಅವರು ನಿರೀಕ್ಷಿತ ಫಲಿತಾಂಶ ಪಡೆದರು.
ಅಧ್ಯಯನದಲ್ಲಿ ಅವರು ಅನುಸರಿಸಿದ ಶಿಸ್ತಿನ ಪದ್ಧತಿಗಳು ಯಶಸ್ಸಿಗೆ ದಾರಿ ಮಾಡಿಕೊಂಡವು. ವಿಷಯಗಳನ್ನು ಸಣ್ಣ ಸಣ್ಣ ಭಾಗಗಳಾಗಿ ವಿಭಜಿಸಿ, ಟಿಪ್ಪಣಿಗಳು ಬರೆಯುತ್ತಾ, ಸಮರ್ಥ ಸಮಯ ನಿರ್ವಹಣೆಯೊಂದಿಗೆ ನಿರಂತರ ಪಠಣ ಮತ್ತು ಮರುಪಠಣವನ್ನು ಮುಂದುವರೆಸಿದವರು. ಯುಪಿಎಸ್‌ಸಿ ಟಾಪರ್‌ಗಳ ಇತಿಹಾಸ, ವಿಡಿಯೋಗಳ ಮೂಲಕ ಪ್ರೇರಣೆ ಪಡೆದರು.
ನಿಸಾ ಉನ್ನಿರಾಜನ್ ಅವರ ಈ ಕಥೆ “ಇದೀಗ ತಡವಾಗಿದೆ” ಎಂಬ ಚಿಂತೆಯಲ್ಲಿ ಬದುಕುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಸ್ಪೂರ್ತಿಯ ಬೆಳಕನ್ನು ನೀಡುತ್ತದೆ. ವಯಸ್ಸು ಅಡ್ಡಿಯಾಗುವುದಿಲ್ಲ, ಪರಿಸ್ಥಿತಿಗಳು ಕಡಿವಾಣ ಹಾಕುವುದಿಲ್ಲ. ಕನಸು ಜೀವಂತವಾಗಿದ್ದರೆ, ಸಾಧನೆ ಸಾಧ್ಯ.