ಆಂಧ್ರಪ್ರದೇಶ : ಭಾರತದ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿಯಲ್ಲಿ ತೇರ್ಗಡೆ ಹೊಂದಲು ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಅಗತ್ಯ. ತಾನು ಐಎಎಸ್ ಅಧಿಕಾರಿಯಾಗಬೇಕೆಂಬ ಛಲದಿಂದ ಯುಪಿಎಸ್ಸಿ ಪರೀಕ್ಷೆಯನ್ನು ಎರಡು ಬಾರಿ ಬರೆದು ಉತ್ತೀರ್ಣರಾದ ಬನ್ನ ವೆಂಕಟೇಶ್ ಯಶೋಗಾಥೆ ಇದು.
ಬನ್ನ ವೆಂಕಟೇಶ್ ಅವರು ಆಂಧ್ರಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ ಜನಿಸಿದರು. ವೆಂಕಟೇಶ್ ಅವರು ಬನ್ನ ಚಂದ್ರ ರಾವ್ ಮತ್ತು ರೋಹಿಣಿ ಅವರ ಹಿರಿಯ ಪುತ್ರ.
ಅವರು ಐದನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದ ಕಾನ್ವೆಂಟ್ನಲ್ಲಿ ಶಿಕ್ಷಣ ಪಡೆದರು. ನಂತರ ಅವರು ಶ್ರೀಕಾಕುಳಂ ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಶಾಲೆಗೆ ಸೇರಿ ಅಲ್ಲಿ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. ನಂತರ ವಿಶಾಖಪಟ್ಟಣಕ್ಕೆ ತೆರಳಿ ಇಂಟರ್ಮೀಡಿಯೇಟ್ ಎಂಪಿಸಿ ಗುಂಪಿನಲ್ಲಿ 98.4% ಅಂಕಗಳನ್ನು ಗಳಿಸಿದರು.
ನಂತರ ತಮಿಳುನಾಡಿನ ಪ್ರತಿಷ್ಠಿತ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್ಐಟಿ), ತಿರುಚಿರಾಪಳ್ಳಿಯಲ್ಲಿ 9.49 CGPA (ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ) ನೊಂದಿಗೆ ಇಂಜಿನಿಯರಿಂಗ್ ಪದವಿ ಗಳಿಸಿದರು. ಚೆನ್ನೈನ ಕ್ವಾಲ್ಕಾಮ್ನಲ್ಲಿ ಕೇವಲ 10 ತಿಂಗಳುಗಳ ಕಾಲ ಡಿಸೈನರ್ ಆಗಿ ಕೆಲಸ ಮಾಡಿದರು. ಒಂದು ವರ್ಷದೊಳಗೆ ಅವರು ಅಸೋಸಿಯೇಟ್ ಇಂಜಿನಿಯರ್ ಆಗಿ ಬಡ್ತಿ ಪಡೆದರು. ಆದರೆ ಅವರು ಆ ಹುದ್ದೆಯನ್ನು ತೊರೆದು ಯುಪಿಎಸ್ಸಿ ಪರೀಕ್ಷೆ ಬರೆಯಲು ನಿರ್ಧರಿಸಿದರು. ಹೀಗಾಗಿ 2021 ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು.
2022 ರಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಅವರು ಪೂರ್ವಭಾವಿ ಪರೀಕ್ಷೆಯಲ್ಲಿ ಯಶಸ್ವಿಯಾದರು. 2023 ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 467 ನೇ ಅಖಿಲ ಭಾರತ ರ್ಯಾಂಕ್ ಗಳಿಸಿ, ಐಪಿಎಸ್ ಅಧಿಕಾರಿಯಾಗುತ್ತಾರೆ.
ಆದರೆ ಬನ್ನ ವೆಂಕಟೇಶ್ ಅವರು ತಾವು ಐಎಎಸ್ ಅಧಿಕಾರಿಯಾಗಬೇಂಬ ಬಯಕೆ ಹೊಂದಿದ್ದರು. ಹೀಗಾಗಿ ಐಪಿಎಸ್ ಹುದ್ದೆಯನ್ನು ಸಹ ತೊರೆದರು. ಆ ವೇಳೆಗೆ ಐಪಿಎಸ್ಗೆ ಆಯ್ಕೆಯಾಗಿ ಹೈದರಾಬಾದ್ನ ಎಸ್ವಿಬಿಪಿಎನ್ಪಿಎಯಲ್ಲಿ ತರಬೇತಿ ಪ್ರಾರಂಭವಾಗಿತ್ತು. 2024 ರಲ್ಲಿ ಮತ್ತೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಅಖಿಲ ಭಾರತ 15ನೇ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.