ಉತ್ತರ ಪ್ರದೇಶ : ಯುಪಿಎಸ್ಸಿ ಪರೀಕ್ಷೆ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅನೇಕ ಅಭ್ಯರ್ಥಿಗಳ ಕನಸಾಗಿರುತ್ತದೆ. ಈ ಪರೀಕ್ಷೆಯನ್ನು ಮೂರನೇ ಬಾರಿಗೆ ಬರೆದು ಪ್ರಥಮ ರ್ಯಾಂಕ್ ಗಳಿಸಿದ ಐಎಎಸ್ ಇಶಿತಾ ಕಿಶೋರ್ ಅವರ ಯಶೋಗಾಥೆ ಇದು.
ಗ್ರೇಟರ್ ನೋಯ್ಡಾ ಮೂಲದ ಐಎಎಸ್ ಅಧಿಕಾರಿ ಇಶಿತಾ ಕಿಶೋರ್ ಅವರು ವಾಯುಪಡೆಯ ದಿವಂಗತ ಅಧಿಕಾರಿಯ ಮಗಳು. ಅವರ ತಾಯಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅಣ್ಣ ವಕೀಲರಾಗಿದ್ದಾರೆ.
ಇಶಿತಾ ಅವರು ಏರ್ ಫೋರ್ಸ್ ಬಾಲ್ ಭಾರತಿ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ. ಇಶಿತಾ ಅವರು ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ್ತಿಯಾಗಿದ್ದು, 2012ರ ಪ್ರತಿಷ್ಠಿತ ಸುಬ್ರತೋ ಕಪ್ ಫುಟ್ಬಾಲ್ ಟೂರ್ನಮೆಂಟ್ ಸೇರಿದಂತೆ ವಿವಿಧ ಪಂದ್ಯಾವಳಿಗಳಲ್ಲಿ ತಮ್ಮ ಶಾಲೆ ಮತ್ತು ರಾಜ್ಯವನ್ನು ಪ್ರತಿನಿಧಿಸಿದ್ದರು. 2004 ರಲ್ಲಿ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದ ಅವರ ತಂದೆ ಕರ್ತವ್ಯ ನಿರ್ವಹಿಸುತ್ತಿರುವಾಗ ನಿಧನರಾದ ನಂತರ ಇಶಿತಾ ಅವರ ಜೀವನವು ಬೇರೆ ತಿರುವು ಪಡೆದುಕೊಂಡಿತು.
ಇಶಿತಾ ಅವರು ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಅರ್ಥಶಾಸ್ತ್ರ (ಎಕನಾಮಿಕ್ಸ್) ಗೌರವ ಪದವಿಯನ್ನು ಪಡೆದರು. ಪದವಿ ಮುಗಿದ ನಂತರ, ಅವರು ಕಂಪನಿಯೊಂದರಲ್ಲಿ ಕೆಲಸ ಪಡೆದರು. ಆದರೆ ಅವರು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧರಾಗಲು ತಮ್ಮ ಕೆಲಸವನ್ನು ತೊರೆದರು. ರಾಜ್ಯಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು ಅನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು.
ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ಇಶಿತಾ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾದರು. ಆದರೆ 2023ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, ಪ್ರಥಮ ರ್ಯಾಂಕ್ ಗಳಿಸಿ ಉತ್ತೀರ್ಣರಾಗುತ್ತಾರೆ. 2023ರ ಬ್ಯಾಚ್ನ ಐಎಎಸ್ ಟಾಪರ್ ಆಗಿರುವ ಇಶಿತಾ ಕಿಶೋರ್ ಅವರು ಪ್ರಸ್ತುತ ಉತ್ತರ ಪ್ರದೇಶದ ಬರೇಲಿಯಲ್ಲಿ ಜಂಟಿ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.