ದೆಹಲಿ : ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಅನೇಕ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಎಲ್ಲರಿಗೂ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕಠಿಣ ಪರಿಶ್ರಮ ಹಾಗೂ ಛಲ ಅಗತ್ಯ. ತಮ್ಮ ಬಾಲ್ಯದ ಕನಸಾದ ಐಎಎಸ್ ಅಧಿಕಾರಿಯಾಗುವ ಗುರಿಯನ್ನು ಸಾಧಿಸಿದ ಕಾಶಿಶ್ ಬಕ್ಷಿ ಅವರ ಯಶೋಗಾಥೆ ಇದು.
ಕಾಶಿಶ್ ಬಕ್ಷಿ ಅವರು ಹರಿಯಾಣದ ಅಂಬಾಲ ಮೂಲದವರು. ಇವರು ಮೇಜರ್ ಜನರಲ್ ಪ್ರವೀಣ್ ಬಕ್ಷಿ ಅವರ ಮಗಳು. ತಂದೆಯ ಸೇನಾ ವರ್ಗಾವಣೆಯಿಂದಾಗಿ ಕಾಶ್ಮೀರ್ ಭಾರತದಾದ್ಯಂತ ಅನೇಕ ನಗರಗಳಲ್ಲಿ ವಾಸಿಸಿದ್ದಾರೆ. ಅವರು ಆರ್ಮಿ ಪಬ್ಲಿಕ್ ಶಾಲೆಗಳು ಸೇರಿದಂತೆ ಏಳು ವಿಭಿನ್ನ ಶಾಲೆಗಳಲ್ಲಿ 10ಕ್ಕಿಂತ ಹೆಚ್ಚು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಕಾಶಿಶ್ ಅವರು ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, 10ನೇ ತರಗತಿಯಲ್ಲಿ 10 ಸಿಜಿಪಿಎ ಮತ್ತು 12ನೇ ತರಗತಿಯಲ್ಲಿ 95% ಅಂಕಗಳನ್ನು ಗಳಿಸಿದ್ದಾರೆ. ದೆಹಲಿ ಪಬ್ಲಿಕ್ ಸ್ಕೂಲ್ ಭೋಪಾಲ್‌ನಲ್ಲಿ 10ರಿಂದ 12ನೇ ತರಗತಿಯವರೆಗೆ ಓದಿದ್ದಾರೆ.
ಕಾಶಿಶ್ ಅವರ ತಂದೆ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ತಾಯಿಯ ಕಡೆಯವರು ವಕೀಲರು ಮತ್ತು ನ್ಯಾಯಾಂಗದ ಹಿನ್ನೆಲೆ ಹೊಂದಿದ್ದರು. ಕಾಶಿಶ್ ಅವರು 2021ರಲ್ಲಿ ಎನ್‌ಎಲ್‌ಐಯು ಭೋಪಾಲ್‌ನಿಂದ ಕಾನೂನು ಪದವಿ ಪಡೆದರು. ಪದವಿಯ ಸಮಯದಲ್ಲಿಯೇ ಅವರು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದರು.
ವಕೀಲರು, ನ್ಯಾಯಾಂಗ ಅಧಿಕಾರಿಗಳು ಮತ್ತು ನಾಗರಿಕ ಸೇವಾಧಿಕಾರಿಗಳ ಹಿನ್ನೆಲೆಯಿರುವ ತಾಯಿಯ ಕಡೆಯವರು ಹಾಗೂ ಸೇನಾಧಿಕಾರಿಗಳ ಹಿನ್ನೆಲೆಯಿರುವ ತಂದೆಯ ಕಡೆಯವರಿಂದ ಪ್ರೇರೇಪಿತರಾಗಿ, ಐಎಎಸ್ ಅಧಿಕಾರಿಯಾಗುವ ತಮ್ಮ ಬಾಲ್ಯದ ಕನಸನ್ನು ಕಾಶಿಶ್ ನನಸಾಗಿಸಲು ಹಗಲು ರಾತ್ರಿ ಅಧ್ಯಯನ ಮಾಡಿದರು.
ಕಾಶಿಶ್ ಬಕ್ಷಿ ಅವರು ಯುಪಿಎಸ್‌ಸಿ ಪರೀಕ್ಷೆಗೆ ಐಚ್ಛಿಕ ವಿಷಯವಾಗಿ ತತ್ವಶಾಸ್ತ್ರವನ್ನು ಆಯ್ಕೆ ಮಾಡಿದ್ದರು. ತಮ್ಮ ಎರಡನೇ ಪ್ರಯತ್ನದಲ್ಲಿ ಯಾವುದೇ ಕೋಚಿಂಗ್ ಇಲ್ಲದೆ, ಯುಪಿಎಸ್‌ಸಿ 2023ರಲ್ಲಿ 54ನೇ ರ‍್ಯಾಂಕ್ ಗಳಿಸಿ ಉತ್ತೀರ್ಣರಾದರು. ಈ ಮೂಲಕ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡರು.