ರಾಜಸ್ಥಾನ : ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಯಂತಹ ಪ್ರತಿಷ್ಠಿತ ಸರ್ಕಾರಿ ಹುದ್ದೆಗಳನ್ನು ಪಡೆಯುವುದು ಅನೇಕ ಯುವಕರ ಕನಸಾಗಿದೆ. ಪ್ರತಿ ವರ್ಷ ಅನೇಕ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ, ಆದರೆ ಎಲ್ಲರಿಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಹೀಗೆ ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ನೇಹಾ ಬೈದ್ವಾಲ್ ಯಶೋಗಾಥೆ ಇದು.
ನೇಹಾ ಬೈದ್ವಾಲ್ 1999ರ ಜುಲೈ 3 ರಂದು ರಾಜಸ್ಥಾನದ ಜೈಪುರದಲ್ಲಿ ಜನಿಸಿದರು. ಅವರು ತಮ್ಮ ಬಾಲ್ಯದ ಹೆಚ್ಚಿನ ಸಮಯವನ್ನು ಛತ್ತೀಸ್ಗಢದಲ್ಲಿ ಕಳೆದರು. ಅವರ ತಂದೆ ಶ್ರವಣ್ ಕುಮಾರ್ ಅವರು ಹಿರಿಯ ಆದಾಯ ತೆರಿಗೆ ಅಧಿಕಾರಿಯಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
ನೇಹಾ ಅವರು ಡಿಪಿಎಸ್ ಕೋರ್ಬಾ ಮತ್ತು ಡಿಪಿಎಸ್ ಬಿಲಾಸ್ಪುರದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ನಂತರ ನೇಹಾ ಅವರು ರಾಯಪುರದ ಡಿಬಿ ಗರ್ಲ್ಸ್ ಕಾಲೇಜಿನಲ್ಲಿ ಪದವಿ ಪಡೆದರು. ಅಲ್ಲಿ ಅವರು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದರು. ಐಎಎಸ್ ಅಧಿಕಾರಿಯಾಗಲು ನೇಹಾ ಅವರಿಗೆ ಅವರ ತಂದೆ ಪ್ರೇರಣೆ ನೀಡಿದರು.
ನೇಹಾ ಬೈದ್ವಾಲ್ ಅವರು ತಮ್ಮ ಮೊದಲ ಕೆಲವು ಪ್ರಯತ್ನಗಳಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ನೇಹಾ ಅವರು ಭರವಸೆ ಕಳೆದುಕೊಳ್ಳದೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಿರ್ಧರಿಸಿದ್ದರು.
ನೇಹಾ ಅವರು ಮೂರು ವರ್ಷಗಳ ಕಾಲ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿದ್ದು, ಕೇವಲ ತಮ್ಮ ಅಧ್ಯಯನದ ಮೇಲೆ ಗಮನಹರಿಸಿದರು. 2021 ರಲ್ಲಿ, ಕೇವಲ 24 ನೇ ವಯಸ್ಸಿನಲ್ಲಿ, ನೇಹಾ ಯುಪಿಎಸ್ಸಿ ಪರೀಕ್ಷೆಯಲ್ಲಿ 569 ನೇ ಅಖಿಲ ಭಾರತ ರ್ಯಾಂಕ್ ಪಡೆದು ಉತ್ತೀರ್ಣರಾದರು.
ಪ್ರಸ್ತುತ ನೇಹಾ ಅವರು ಗುಜರಾತ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಹಲವಾರು ಬಾರಿ ಎಸ್ಎಸ್ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೂ, ಐಎಎಸ್ ಅಧಿಕಾರಿಯಾಗುವುದು ಅವರ ಕನಸಾಗಿದ್ದರಿಂದ ಯಾವುದೇ ಸರ್ಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿಲ್ಲ. ಇನ್ನು ನೆಹಾ ಅವರು ಇನ್ಸ್ಟಾಗ್ರಾಮ್ನಲ್ಲಿ 123 ಸಾವಿರ ಅನುಯಾಯಿಗಳನ್ನು ಹೊಂದಿದ್ದು, ಅತ್ಯಂತ ಜನಪ್ರಿಯರಾಗಿದ್ದಾರೆ.