ರಾಜಸ್ಥಾನ : ಭಾರತದಲ್ಲಿ ಯುಪಿಎಸ್ಸಿ ಪರೀಕ್ಷೆಯು ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಆಕಾಂಕ್ಷಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಕೆಲವರು ಮಾತ್ರ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ. ಹೀಗೆ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಐಎಎಸ್ ಅಧಿಕಾರಿ ರವಿ ಕುಮಾರ್ ಸಿಹಾಗ್ ಅವರ ಯಶೋಗಾಥೆ ಇದು.
ಐಎಎಸ್ ಅಧಿಕಾರಿ ರವಿ ಕುಮಾರ್ ಸಿಹಾಗ್ ಅವರು 1995ರ ನವೆಂಬರ್ 2 ರಂದು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಜನಿಸಿದರು. ರವಿ ಅವರು ರೈತ ರಾಮಕುಮಾರ್ ಸಿಹಾಗ್ ಮತ್ತು ಗೃಹಿಣಿ ವಿಮಲಾ ದೇವಿ ಅವರ ಪುತ್ರ.
ರವಿ ಅವರು ಶ್ರೀಗಂಗಾನಗರದ 3 ಬಿಎಎಂ ವಿಜಯನಗರದಲ್ಲಿ ಹಿಂದಿ ಮಾಧ್ಯಮದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರು 7ನೇ ತರಗತಿಯವರೆಗೆ ಸರಸ್ವತಿ ವಿದ್ಯಾ ಮಂದಿರದಲ್ಲಿ, ನಂತರ 11ನೇ ತರಗತಿಯನ್ನು ಅನೂಪ್ಗಢದ ಶಾರದಾ ಶಾಲೆಯಲ್ಲಿ ಮತ್ತು 12ನೇ ತರಗತಿಯನ್ನು ವಿಜಯನಗರದ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ ಮಾಡಿದರು.
ಶಾಲಾ ಶಿಕ್ಷಣದ ನಂತರ, ಅವರು ಅನೂಪ್ಗಢದ ಶಾರದಾ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಪದವಿ ಮುಗಿಯುವವರೆಗೂ ರವಿ ಅವರು ತಮ್ಮ ತಂದೆಗೆ ಹೊಲದಲ್ಲಿ ಸಹಾಯ ಮಾಡುತ್ತಿದ್ದರು. ಅವರಿಗೆ ತಮ್ಮ ವೃತ್ತಿಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂಬ ಕನಸಿತ್ತು.
ಐಎಎಸ್ ಅಧಿಕಾರಿಯಾಗುವ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಅವರು ನಾಲ್ಕು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆದರು. 2018ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು, 337ನೇ ರ್ಯಾಂಕ್ ಗಳಿಸಿ ಐಡಿಎಎಸ್ ಕೇಡರ್ ಪಡೆದರು. 2019 ರಲ್ಲಿ ಎರಡನೇ ಬಾರಿಗೆ ಪರೀಕ್ಷೆ ಬರೆದ ಅವರು, 317ನೇ ರ್ಯಾಂಕ್ ಗಳಿಸಿ ಐಆರ್ಟಿಎಸ್ ಕೇಡರ್ ಪಡೆದರು.
2020ರಲ್ಲಿ ಮೂರನೇ ಬಾರಿಗೆ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. 2021ರಲ್ಲಿ ನಾಲ್ಕನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 18ನೇ ಅಖಿಲ ಭಾರತ ರ್ಯಾಂಕ್ ಗಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಮೂಲಕ ಅಂತಿಮವಾಗಿ ಐಎಎಸ್ ಅಧಿಕಾರಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.
































