ಐಎಎಸ್ ಸುಲೋಚನಾ ಮೀನಾ ಯಶಸ್ಸಿನ ಕಥನ

WhatsApp
Telegram
Facebook
Twitter
LinkedIn

ನವದೆಹಲಿ : ಒಂದು ಸಣ್ಣ ಹಳ್ಳಿಯಿಂದ ಹೊರಟ ಕನಸು, ಕೇವಲ 22ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿಯನ್ನು ಜಯಿಸಿ ಆಡಳಿತದ ಕಾರಿಡಾರ್‌ಗಳಿಗೆ ಪ್ರವೇಶಿಸಿದೆ. ಆ ಯಶಸ್ಸಿನೊಂದಿಗೆ ಹೆತ್ತವರ ಕನಸುಗಳಿಗೆ ಹೊಸ ರೆಕ್ಕೆಗಳು ಮೂಡಿದರೆ, ಅಸಂಖ್ಯಾತ ಯುವತಿಯರಿಗೆ ಹೊಸ ದಾರಿಯೊಂದು ತೆರೆದಿದೆ. ಆ ಕನಸಿನ ಹೆಸರು ಸುಲೋಚನಾ ಮೀನಾ.

ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಅದಲ್ವಾಡಾ ಎಂಬ ಸಾಧಾರಣ ಹಳ್ಳಿಯಿಂದ ಹೊರಟ ಸುಲೋಚನಾ ಮೀನಾ ಅವರ ಏರಿಕೆ ನಿಜಕ್ಕೂ ಅಸಾಧಾರಣ. ಕೇವಲ 22ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾದ ಅವರು, ಇದೀಗ ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ಉಪವಿಭಾಗಾಧಿಕಾರಿ (SDO) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಜಿಲ್ಲೆಯ ಅತ್ಯಂತ ಕಿರಿಯ ಐಎಎಸ್ ಅಧಿಕಾರಿ ಮಾತ್ರವಲ್ಲ, ತಮ್ಮ ಹಳ್ಳಿಯಿಂದ ಆಡಳಿತ ಸೇವೆಗೆ ಆಯ್ಕೆಯಾದ ಮೊದಲ ವ್ಯಕ್ತಿಯಾಗಿಯೂ ಅವರು ಗುರುತಿಸಿಕೊಂಡಿದ್ದಾರೆ. ಸುಲೋಚನಾ 2021ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು, 2022ರಲ್ಲಿ ಪ್ರಕಟವಾದ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ 415ನೇ ರ್‍ಯಾಂಕ್ ಮತ್ತು ಎಸ್‌ಟಿ ವಿಭಾಗದಲ್ಲಿ ಆರನೇ ಸ್ಥಾನ ಗಳಿಸಿದರು. ಮೊದಲ ಪ್ರಯತ್ನದಲ್ಲೇ, ಇಷ್ಟೊಂದು ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡುವ ಮೂಲಕ, ದೇಶದ ಅತ್ಯಂತ ಕಿರಿಯ ಯುಪಿಎಸ್‌ಸಿ ಉತ್ತೀರ್ಣ ಅಭ್ಯರ್ಥಿಗಳ ಪಟ್ಟಿಗೆ ಅವರು ಸೇರ್ಪಡೆಯಾದರು.

ಸುಲೋಚನಾ ಅವರ ಪೋಷಕರು ಆರಂಭದಲ್ಲಿ ತಾವು ವೈದ್ಯೆಯಾಗಬೇಕೆಂದು ಬಯಸಿದ್ದರಂತೆ. ಆದರೆ ಆಡಳಿತಾತ್ಮಕ ಸೇವೆಯನ್ನು ಆರಿಸಿಕೊಂಡು ತಮ್ಮ ತಂದೆಯ ಆಸೆಗೂ ಹಾಗೂ ತಮ್ಮ ಸ್ವಂತ ಕನಸುಗಳಿಗೂ ಹೊಸ ದಿಕ್ಕು ನೀಡಿದರು ಅಉಲೋಚನಾ. ಇಂದು ಅವರು ತಮ್ಮ ಕುಟುಂಬದ ಹೆಮ್ಮೆ ಮಾತ್ರವಲ್ಲ, ತಮ್ಮ ಹಳ್ಳಿಯ ಹುಡುಗಿಯರಿಗೆ ಧೈರ್ಯವಾಗಿ ದೊಡ್ಡ ಕನಸು ಕಾಣುವ ಶಕ್ತಿ ನೀಡುವ ದಾರಿದೀಪವಾಗಿದ್ದಾರೆ. ಅವರು ಶಾಲಾ ಶಿಕ್ಷಣದ ಬಳಿಕ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರದಲ್ಲಿ ಬಿ.ಎಸ್ಸಿ. ಪದವಿ ಪಡೆದರು. ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್)ಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಾಮಾಜಿಕ ಸೇವೆಯ ಮೂಲಕ ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡರು. ಇದೇ ಅನುಭವಗಳು ಅವರ ಆಡಳಿತ ವೃತ್ತಿಜೀವನಕ್ಕೆ ಬಲವಾದ ಅಡಿಪಾಯವಾಯಿತು.

ಸುಲೋಚನಾ ಅವರು ತಮ್ಮ ಕುಟುಂಬದ ಮೊದಲ ಮಗಳು, ತಮ್ಮ ಹಳ್ಳಿಯಿಂದ ಐಎಎಸ್ ಆದ ಮೊದಲ ಮಹಿಳೆ ಹಾಗೂ ಜಿಲ್ಲೆಯಿಂದ ಆಯ್ಕೆಯಾದ ಅತ್ಯಂತ ಕಿರಿಯ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಯಶಸ್ಸು ಇಡೀ ಗ್ರಾಮದ ದೃಷ್ಟಿಕೋನವನ್ನೇ ಬದಲಿಸಿದೆ. ಹಿಂದೆ ಸೀಮಿತ ಕನಸುಗಳಷ್ಟೇ ಹೊಂದಿದ್ದ ಅನೇಕ ಹುಡುಗಿಯರು ಇದೀಗ ಯುಪಿಎಸ್‌ಸಿ ತಯಾರಿಯಲ್ಲಿ ತೊಡಗಿದ್ದಾರೆ. ಹಲವು ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ದೆಹಲಿ ಹಾಗೂ ಜೈಪುರಕ್ಕೆ ಕಳುಹಿಸಲು ಮುಂದಾಗಿವೆ. ಸುಲೋಚನಾ ಅವರ ಸಾಧನೆಗಳು ಯುವ ಪೀಳಿಗೆಯಲ್ಲಿ ಹೊಸ ಮಹತ್ವಾಕಾಂಕ್ಷೆಯ ಅಲೆಯನ್ನು ಹುಟ್ಟುಹಾಕಿವೆ. ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಅವರು ನೀಡುವ ಸಲಹೆಯೂ ಸರಳ ಮತ್ತು ಪರಿಣಾಮಕಾರಿ. ಕಾಲೇಜು ಮುಗಿದ ತಕ್ಷಣದಿಂದಲೇ ಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು ಹಾಗೂ ಪ್ರಚಲಿತ ವಿದ್ಯಮಾನಗಳೊಂದಿಗೆ ಸದಾ ನವೀಕೃತರಾಗಿರಬೇಕು ಎಂದು ಅವರು ಹೇಳುತ್ತಾರೆ. ತಾವು ದಿನಕ್ಕೆ 8ರಿಂದ 9 ಗಂಟೆಗಳವರೆಗೆ ಅಧ್ಯಯನ ಮಾಡುತ್ತಿದ್ದರು. ಯುಪಿಎಸ್‌ಸಿ ತಯಾರಿಯಲ್ಲಿ ತಾಳ್ಮೆಯೇ ಅತ್ಯಂತ ಮುಖ್ಯ ಎಂದು ಅವರು ನಂಬುತ್ತಾರೆ.

ಅವರ ಅಭ್ಯಾಸದಲ್ಲಿ ಟೆಲಿಗ್ರಾಮ್ ಚಾನೆಲ್‌ಗಳು, ಉಚಿತ ಆನ್‌ಲೈನ್ ಟಿಪ್ಪಣಿಗಳು, ದೈನಂದಿನ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆ ಹಾಗೂ ಪಿಡಿಎಫ್‌ಗಳು ತಮ್ಮ ಸಿದ್ಧತೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಅವರು ತಮ್ಮ ಯುಪಿಎಸ್‌ಸಿ ಸಿದ್ಧತೆಯನ್ನು ಎನ್‌ಸಿಇಆರ್‌ಟಿ ಪುಸ್ತಕಗಳಿಂದ ಆರಂಭಿಸಿ, ನಂತರ ಪ್ರಮಾಣಿತ ಉಲ್ಲೇಖ ಗ್ರಂಥಗಳತ್ತ ಮುಂದುವರೆದರು. ಇಂದು ಸುಲೋಚನಾ ಮೀನಾ ಅವರ ಪ್ರಯಾಣ, ದೃಢನಿಶ್ಚಯ, ತಾಳ್ಮೆ ಮತ್ತು ಸರಿಯಾದ ಮಾರ್ಗದರ್ಶನ ಇದ್ದರೆ ಯಾವ ಗುರಿಯೂ ಅಸಾಧ್ಯವಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದೆ. ಸಣ್ಣ ಹಳ್ಳಿಯ ಹುಡುಗಿಯಿಂದ ದೇಶದ ಆಡಳಿತ ವ್ಯವಸ್ಥೆಯ ಭಾಗವಾಗುವವರೆಗೆ ಅವರ ಪಯಣ, ಸಾವಿರಾರು ಯುವತಿಯರಿಗೆ ಹೊಸ ಕನಸು ಕಾಣುವ ಧೈರ್ಯವನ್ನು ನೀಡುತ್ತಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon