ಚಿತ್ರದುರ್ಗ: ರಾಷ್ಟ್ರಕವಿ ಕುವೆಂಪುರವರ ಸಾಹಿತ್ಯದಲ್ಲಿನ ವೈಚಾರಿಕ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಖ್ಯಾತ ಕವಿ ಚಂದ್ರಶೇಖರ ತಾಳ್ಯ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಾನವ ಹಾಗೂ ಕುವೆಂಪು ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕವಿ ಕುವೆಂಪು ಬ್ರಾಹ್ಮಣ ವಿರೋಧಿ ಅಲ್ಲ ಪುರೋಹಿತ ಶಾಹಿ ವಿರೋಧಿ. ಈ ಪುರೋಹಿತ ಶಾಹಿ ಎಲ್ಲಾ ವರ್ಗದಲ್ಲೂ ಇದೆ. ಇವರು ಆಚರಿಸುತ್ತಿದ್ದ ವ್ಯಕ್ತಿ ಪೂಜೆ ಮತ್ತು ಶುಷ್ಕ ಆಚರಣೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಸಾಹಿತ್ಯ, ಆಧ್ಯಾತ್ಮ ಮತ್ತು ವೈಚಾರಿಕ ಚಿಂತನೆಗಳು ಅವರನ್ನು ವಿಶ್ವ ಮಾನವರನ್ನಾಗಿಸಿವೆ. ಕುವೆಂಪು ಅವರ ಸಮಗ್ರ ಸಾಹಿತ್ಯದಲ್ಲಿ ವೈಚಾರಿಕ ತತ್ವವಿದೆ. ಸರಳ ಜೀವನದ ಮಂತ್ರ ಮಾಂಗಲ್ಯದ ಸೂತ್ರವಿದೆ. ಶಾಹಿ ಹಾಗೂ ಬ್ರಾಹ್ಮಣ ವಿರೋಧಿಯಲ್ಲ. ಬ್ರಾಹ್ಮಣರು ಮತ್ತು ಸಮಾಜದ ಕೆಲ ವರ್ಗದವರು ಆಚರಿಸುತ್ತಿದ್ದ ವ್ಯಕ್ತಿ ಪೂಜೆ ಮತ್ತು ಆರಾಧನೆಯನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಸಾಹಿತ್ಯ, ಆಧ್ಯಾತ್ಮ ಮತ್ತು ವಿಜ್ಞಾನ _ ವೈಚಾರಿಕತ ಚಿಂತನೆಗಳು ಅವರನ್ನು ವಿಶ್ವ ಮಾನವನನ್ನಾಗಿಸಿವೆ. ಜಲಗಾರ, ಶೂದ್ರ ತಪಸ್ವಿ, ಬೆರಳ್ಗೆಕೊರಳ್ ಮೊದಲಾದ ನಾಟಕಗಳಲ್ಲಿ ಆತ್ಮಶ್ರೀಗಾಗಿ ನಿರಂಕುಶ ಮಂತ್ರಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ ಮೊದಲಾದ ಲೇಖನಗಳಲ್ಲಿ ಮತ್ತು ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಈ ಕಾದಂಬರಿಗಳಲ್ಲಿ ಅವರ ವಿಶ್ವ ಮಾನವ ಪ್ರಜೆಯನ್ನು ಕಾಣಬಹುದು. ವಿದ್ಯಾರ್ಥಿಗಳು ಕುವೆಂಪು ಸಮಗ್ರ ಸಾಹಿತ್ಯವನ್ನು ತಪಸ್ಸಿನ ರೀತಿಯಲ್ಲಿ ಅಧ್ಯಯನ ಮಾಡಿದರೆ ಅವರ ವೈಚಾರಿಕ ಚಿಂತನೆಗಳು ಎದೆ ಯೊಳಗೆ ಇಳಿಯಲು ಸಾಧ್ಯ ಎಂದರು.
ಸಾಹಿತಿ ತಿಪ್ಪಣ್ಣ ಮರಿಕುಂಟೆ ಮಾತನಾಡಿ, ಕುವೆಂಪು ಶ್ರೀರಾಮಾಯಣ ದರ್ಶನಂ ಮತ್ತು ವಾಲ್ಮೀಕಿ ರಾಮಾಯಣವನ್ನು ಮುಖಾಮುಖಿಯಾಗಿಸಬೇಕು. ಆಗ ಮಾತ್ರ ಸಾಮಾಜಿಕ ಬದುಕಿನ ಮೌಲ್ಯಗಳು ಕಂಡುಬರುತ್ತವೆ. ಪ್ರತಿ ಪಾತ್ರವೂ ಕ್ರಿಯಾಶೀಲತೆ ಜತೆಗೆ ಮನುಷ್ಯ ಪ್ರೀತಿ ಸಾರುತ್ತವೆ. ಹಾಗಾಗಿ ಕುವೆಂಪು ಸಾಹಿತ್ಯ ಅಧ್ಯಯನ ಪ್ರಶ್ನೆಯ ಮೂಲಕವೇ ಪ್ರವೇಶ ಮಾಡುವ ಮೂಲಕ ಉತ್ತರ ಕಂಡುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಕುವೆಂಪು ಸಾಹಿತ್ಯದ ತಿಳಿವಳಿಕೆಯಿಂದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಪರಿಪೂರ್ಣ ಬದುಕಿನ ಮಹತ್ವ ಅರ್ಥವಾಗುತ್ತದೆ. ಪ್ರಸ್ತುತ ಜಾತಿ, ಮಾತು, ಧರ್ಮಗಳು ತಂದೊಡ್ಡಿರುವ ಬಿಕ್ಕಟ್ಟುಗಳಿಗೆ ಕುವೆಂಪು ಸಾಹಿತ್ಯದಲ್ಲಿ ಪರಿಹಾರವಿದೆ. ಕುವೆಂಪು ಸಾಹಿತ್ಯ ಸೃಜನಶೀಲತೆಯನ್ನು ಬೆಳೆಸುತ್ತದೆ. ವಿಶ್ವ ಮೈತ್ರಿ ಜೀವನ ಪ್ರೀತಿ ಮೂಡಿಸುತ್ತದೆ. ನಮ್ಮೊಳಗಿನ ಅಳುಕನ್ನು ಹೋಗಲಾಡಿಸಿ ಬೌದ್ಧಿಕ ಮತ್ತು ನೈತಿಕ ಶಕ್ತಿ ತುಂಬುತ್ತದೆ ಅವರ ಸಾಹಿತ್ಯದ ಅಧ್ಯಯನದಿಂದ ಅಲ್ಲಿನ ಪಾತ್ರಗಳೊಂದಿಗೆ ಅನುಸಂಧಾನಗೊಂಡರೆ ಕುವೆಂಪು ಬರಹಕ್ಕೆ ಗೌರವ ಕೊಟ್ಟಂತಾಗುತ್ತದೆ ಇದರಿಂದ ಅವರ ಸಾಹಿತ್ಯದ ರುಚಿ -ಸತ್ವ ತಿಳಿಯುತ್ತದೆ. ಪ್ರಕೃತಿ ಮತ್ತು ಮನುಷ್ಯ ಪ್ರೀತಿಯನ್ನು ಕಂಡುಕೊಳ್ಳಲು ಅವರ ಸಾಹಿತ್ಯದ ಅಭಿರುಚಿಯಿಂದ ಸಾಧ್ಯ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಸಾಂಸ್ಕøತಿಕ ಸಂಚಾಲಕ ಪ್ರೊ. ಸಿ.ಈ.ಜಗನ್ನಾಥ ಮಾತನಾಡಿದರು. ಐಕ್ಯೂಎಸಿ ಸಂಚಾಲಕಿ ಪ್ರೊ. ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಣ ಅಧಿಕಾರಿ ಪ್ರೊ.ಬಿ ಸುರೇಶ್, ಕನ್ನಡ ಸಹ ಪ್ರಾಧ್ಯಾಪಕ ಕೆ. ಚಿತ್ತಯ್ಯ, ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕಿ ಪ್ರೊ. ಲತಾ, ಕಾಲೇಜಿನ ಅಧೀಕ್ಷಕ ಹರೀಶ್ ಬಾಬು ರೆಡ್ಡಿ ಇದ್ದರು.

































