ಚಿತ್ರದುರ್ಗ : ಅರವತ್ತು ವರ್ಷಗಳ ಹಿಂದೆಯೇ ಎಲ್ಲರಿಗೂ ಸಮಾನ ಶಿಕ್ಷಣ ಸಿಕ್ಕಿದಿದ್ದರೆ ನಾವುಗಳ್ಯಾರು ಒಳ ಮೀಸಲಾತಿಯನ್ನು ಕೇಳುತ್ತಿರಲಿಲ್ಲ ಎಂದು ಖ್ಯಾತ ಸಾಹಿತಿ ಬೆಂಗಳೂರಿನ ದು.ಸರಸ್ವತಿ ಅಭಿಪ್ರಾಯಪಟ್ಟರು.
ಸಾಮಾಜಿಕ ಸಂಘರ್ಷ ಸಮಿತಿ ಚಿತ್ರದುರ್ಗ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟ ತುಮಕೂರು ಸಹಯೋಗದೊಂದಿಗೆ ವಿಜ್ಞಾನ ಕಾಲೇಜು ಎದುರು ಆದಿ ಕರ್ನಾಟಕ ಹಾಸ್ಟೆಲ್ನಲ್ಲಿ ಭಾನುವಾರ ನಡೆದ ಪ್ರೊ.ಬಿ.ಕೃಷ್ಣಪ್ಪನವರ ಜನ್ಮದಿನ ಧೃವಿಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭೂಮಿಯ ಹಕ್ಕನ್ನು ಜಾರಿಗೊಳಿಸುವವರು ಪ್ರಬಲ ಜಾತಿಯವರು. ನಾನಷ್ಟೆ ಮಿಗಿಲು ಎನ್ನುವ ಬ್ರಾಹ್ಮಣ್ಯಶಾಹಿ, ಮನುವಾದಿಗಳನ್ನು ಎದೆಯೊಳಗಿಂದ ಈಚೆಗೆ ತೆಗೆಯಬೇಕು. ಪ್ರಜಾಪ್ರಭುತ್ವದ ಮೂಲಭೂತ ತಿರುಳು ಭಿನ್ನಮತ. ಹೊರಗಿನಿಂದ ಬರುವ ಪ್ರಾಬಲ್ಯವನ್ನು ವಿರೋಧಿಸುವುದರ ಜೊತೆಗೆ ಒಳಗಿನ ಪ್ರಾಬಲ್ಯವನ್ನು ವಿರೋಧಿಸುತ್ತಿದ್ದ ಅಂಬೇಡ್ಕರ್ರವರು ನಾಗರೀಕ ಪ್ರಜ್ಞೆ ಬಗ್ಗೆ ಮಾತನಾಡಿದ್ದಾರೆ. ಹತ್ತು ವರ್ಷಗಳಲ್ಲಿ ನೂರು ಪೌರ ಕಾರ್ಮಿಕರು ಮಲದ ಗುಂಡಿಯಲ್ಲಿ ಬಿದ್ದು ಸತ್ತಿದ್ದಾರೆ. ದ್ವೇಷಿಸುವವರನ್ನು ಪ್ರೀತಿಸುವುದಕ್ಕೆ ದೊಡ್ಡ ತಾಕತ್ತು, ಶಕ್ತಿಯಿರಬೇಕೆಂದು ಹೇಳಿದರು.
ಕಸವನ್ನು ವಿಲೇವಾರಿ ಮಾಡುವವರು ಪೌರ ಕಾರ್ಮಿಕರು. ಆದರೆ ಆಳುವವರಿಗೆ ಪೌರ ಕಾರ್ಮಿಕರ ಕಷ್ಟ ಏನೆಂಬುದು ಗೊತ್ತಾಗುತ್ತಿಲ್ಲ. ಪ್ರಜ್ಞೆ, ಕರುಣೆ, ಮೈತ್ರಿಯೇ ಬುದ್ದತ್ವ. ಬಂಧುತ್ವವಿಲ್ಲದ ಸ್ವಾತಂತ್ರ್ಯ ಸಮಾನತೆಗೆ ಅರ್ಥವಿಲ್ಲ. ಸಹೋದರತ್ವವನ್ನು ಬೆಸೆಯುವ ಸೇತುವೆಗಳು ಕಡಿಮೆಯಾಗುತ್ತಿವೆ. ಚಕ್ರತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಅಂದುಕೊಂಡಿದ್ದನ್ನು ಸಾಧಿಸಬಹುದು. ಹೆಣ್ಣು ಮಕ್ಕಳನ್ನು ಜೊತೆಯಲ್ಲಿ ಸೇರಿಸಿಕೊಳ್ಳದಿದ್ದರೆ ಯಾವ ಚಳುವಳಿಯ ಯಶಸ್ವಿಯಾಗುವುದಿಲ್ಲವೆಂದು ನಿರ್ಧಾಕ್ಷಣ್ಯವಾಗಿ ನುಡಿದರು.
ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಎಸ್.ಮಾರೆಪ್ಪ ಪ್ರೊ.ಬಿ.ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತ ಧೃವಿಕರಣ ಕಟ್ಟುವಿಕೆ, ಮುನ್ನಡೆಸುವುದು ಮಾದಿಗರಿಂದ ಸಾಧ್ಯ. ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ತೀರ್ಪು ನೀಡಿ ಆ.1 ಕ್ಕೆ ಒಂದು ವರ್ಷವಾಗಲಿದೆ. ಇನ್ನು ಸರ್ಕಾರಗಳಿಗೆ ಬುದ್ದಿ ಬಂದಂತಿಲ್ಲ. ಚಳುವಳಿಗಾರ ಪ್ರೊ.ಬಿ.ಕೃಷ್ಣಪ್ಪನವರ ನಂತರ ಕಟ್ಟುವಿಕೆ ಮಾದಿಗರಿಗೆ ಒಲಿದು ಬಂದಿದೆ. ಆರ್.ಎಸ್. ಬಿಜೆಪಿ.ಯಿಂದ ಆತಂಕವಿದೆ ಎಂದು ನೋವು ವ್ಯಕ್ತಪಡಿಸಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಒಳ ಮೀಸಲಾತಿ ಹೋರಾಟಕ್ಕೆ ಇಳಿದಿದ್ದೇವೆ. ಜಾಗತಿಕರಣ, ಖಾಸಗಿಕರಣದ ಬಗ್ಗೆ ಯಾರು ಗಂಭೀರವಾಗಿ ಮಾತನಾಡುತ್ತಿಲ್ಲ. ಧೃವಿಕರಣ ಮುಖ್ಯವಾಗಬೇಕು. ಪ್ರೊ.ಬಿ.ಕೃಷ್ಣಪ್ಪನವರ ನಂತರ ಹೋರಾಟ ಕೈಬಿಟ್ಟಿದ್ದೇವೆ. ಮಾಯಾವತಿ, ಕಾನ್ಷಿರಾಂ ಇವರುಗಳನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಒಳ ಮೀಸಲಾತಿ ಜಾರಿ, ಧೃವಿಕರಣ, ಖಾಸಗಿಕರಣ, ಭೂ ಸುಧಾರಣೆ, ಭೂಮಿ ಹಕ್ಕಿನ ಬಗ್ಗೆ ಧ್ವನಿ ಎತ್ತದಿದ್ದರೆ ಚಳುವಳಿಗೆ ಅರ್ಥ ಬರುವುದಿಲ್ಲವೆಂದರು.
ಸಾಮಾಜಿಕ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಡಿ.ದುರುಗೇಶಪ್ಪ, ಪರಿಶಿಷ್ಠ ಜಾತಿ, ಪರಿಶಿಷ್ಟ ಪಂಗಡ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್, ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎ.ಚಿಕ್ಕಣ್ಣ, ನಿವೃತ್ತ ಪ್ರಾಂಶುಪಾಲರಾದ ವಿ.ಬಸವರಾಜ್, ಬಸವರಾಜ್, ಎಂ.ಡಿ.ರವಿ, ಇಮ್ತಿಯಾಜ್ ಹುಸೇನ್
ವಿಪಶ್ಯನ ನಿರ್ವಹಣೆಗಾರ ಬಿ.ಜಿ.ಗೋವಿಂದಪ್ಪ, ಪ್ರೊ.ಸಿ.ಕೆ.ಮಹೇಶ್, ಎಸ್.ಜಯಣ್ಣ ಇನ್ನು ಅನೇಕರು ವೇದಿಕೆಯಲ್ಲಿದ್ದರು.